
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಸಿದ್ದಿ ಪುರುಷ ಶ್ರೀ ವಿಶ್ವಾರಾಧ್ಯರ ಜನ್ಮಕ್ಷೇತ್ರ ಗಂವ್ಹಾರದಿಂದ ಅಬ್ಬೆತುಮಕೂರವರೆಗೆ ಪ್ರತಿವರ್ಷದ ಪದ್ದತಿಯಂತೆ ಪರಂಪರಾ ಪಾದಯಾತ್ರೆಯನ್ನು ಜನ ಕಲ್ಯಾಣ ಮತ್ತು ಲೋಕ ಕಲ್ಯಾಣಕ್ಕಾಗಿ ಕೈಗೊಳ್ಳಲಾಗುತ್ತಿದೆ ಎಂದು ಪೀಠಾಧಿಪತಿ ಡಾ ಗಂಗಾಧರ ಮಹಾಸ್ವಾಮಿಗಳು ನುಡಿದರು.
ಸೋಮವಾರ ದಂದು ಬೆಳಗ್ಗೆ ಗಂವ್ಹಾರದ ಪೀಠಾಧೀಶ ಕಾಶೀಪೀಠದ 65ನೇ ಜಗದ್ಗುರು ಬನ್ನಿಬಸವೇಶ್ವರರ ಕರ್ತೃ ಗದ್ದುಗೆಗೆ ಮಹಾಪೂಜೆ ನೆರವೇರಿಸಿ ಪಾದಯಾತ್ರಗೆ ಚಾಲನೆಯನ್ನು ನೀಡಿ ಮಾತನಾಡಿದ ಅವರು, ವಿಶ್ವರಾಧ್ಯರು ಜನಿಸಿದ ಈ ಗಂವ್ಹಾರ ಅತ್ಯಂತ ಪವಿತ್ರವಾದ ನೆಲವಾಗಿದೆ. ಅವರು ಕಿರಿಯ ವಯಸ್ಸಿನವರು ಇದ್ದಾಗಲೇ ಹಿರಿದಾದ ಭಾವವನ್ನು ತೋರಿ ಎಲ್ಲರನ್ನು ಒಂದೇ ಎಂದು ಕಾಣುವ ಗುಣವನ್ನು ಹೊಂದಿದವರಾಗಿದ್ದರೆಂದು ಹೇಳಿದರು.
ಕಾಶೀ ಘನ ಪಂಡಿತರಾಗಿ ತಾವು ಸಂಪಾದಿಸಿದ ಜ್ಞಾನವನ್ನು ಲೋಕದ ಜನರಿಗೆ ಉಣಬಡಿಸುತ್ತ ಲೋಕ ಸಂಚಾರವನ್ನು ಕೈಗೊಂಡು ಆನೇಕ ಜನರನ್ನು ಉದ್ದರಿಸುತ್ತಾರೆ. ನಂತರ ಮಾಲಿ ಸಕ್ರೆಪ್ಪಗೌಡನ ಭಕ್ತಿಗೆ ಒಲಿದು ಅಬ್ಬೆತುಮಕೂರಿಗೆ ಬಂದು ನೆಲೆ ನಿಲ್ಲುತ್ತಾರೆ. ಅವರು ನೆಲೆಸಿದ ಅಬ್ಬೆತಮಕೂರು ಇಂದು ಅವಿಮುಕ್ತ ಕ್ಷೇತ್ರವಾಗಿ ಲಕ್ಷಾಂತರ ಭಕ್ತರ ಭಕ್ತಿಯ ತಾಣವಾಗಿದೆ ಎಂದರು.
ಜನ ಮತ್ತು ಲೋಕ ಕಲ್ಯಾಣಕ್ಕಾಗಿ ಮೂರು ದಿನಗಳ ಕಾಲ ಕೈಗೊಳ್ಳುವ ಈ ಪಾದಯಾತ್ರೆಯಲ್ಲಿ ಬಾಲಕರಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಭಕ್ತಿಯಿಂದ ಪಾಲ್ಗೊಂಡು ವಿಶ್ವಾರಾಧ್ಯರ ಕೃಪೆಗೆ ಪಾತ್ರರಾಗುತ್ತಾರೆ ಎಂದು ತಿಳಿಸಿದರು. ಮಠದ ಕಿರಿಯ ಸ್ವಾಮಿಗಳಾದ ಶಿವಶೇಖರ ವಿಶ್ವಾರಾಧ್ಯ ಶಿವಾಚಾರ್ಯರು ಪಾದಯಾತ್ರೆಯಲ್ಲಿ ಜತೆಗಿದ್ದರು.
ಮಧ್ಯಾಹ್ನ 1 ಗಂಟೆಗೆ ಪಾದಯಾತ್ರೆ ಸಕಲ ಮಂಗಲ ವಾದ್ಯಗಳೊಂದಿಗೆ ಅಮೃತೇಶ್ವರ ಮಂದಿರದಿಂದ ಪೂಜ್ಯರ ದರ್ಶನ, ಪ್ರಸಾದ ಪಡೆದುಕೊಂಡು ವಿಶ್ವಾರಾಧ್ಯರ ಜನ್ಮಭೂಮಿ ಪಂಚಗೃಹ ತೋಪಕಟ್ಟಿ ಹಿರೇಮಠದಿಂದ ಹೊರಟಿತು.
ಮುಂದೆ ಹೊರಟ ಪಾದಯಾತ್ರೆ ಗ್ರಾಮದ ಸೀಮಾಂತರದಲ್ಲಿ ಊರಿನ ಚನ್ನಪ್ಪ ಸಾಹು ಬಿರೆದಾರ ಇವರ ಹೊಲದಲ್ಲಿ ನಿರ್ಮಿಸಿದ ಗುರುಮಂಟಪದಲ್ಲಿ ಶ್ರೀಗಳಿಗೆ ಪಾದಪೂಜೆ ನೆರವೇರಿತು. ಅಲ್ಲಿ ಎಲ್ಲ ಭಕ್ತಗಣ ಪ್ರಸಾದ ಸ್ವೀಕರಿಸಿ ಮುಂದೆ ಹೊರಟು ಮಾರ್ಗಮಧ್ಯದಲ್ಲಿ ಅಲ್ಲಲ್ಲಿ ಅನೇಕ ಭಕ್ತರ ವಿಶ್ರಾಂತಿಕಟ್ಟೆಯಲ್ಲಿ ಪಾದಪೂಜೆಯನ್ನು ಮುಗಿಸಿಕೊಂಡು ಪಾದಯಾತ್ರೆ ಅಣಬಿ ಗ್ರಾಮವನ್ನು ತಲುಪಿತು
ಅಣಬಿ ಗ್ರಾಮದ ಭಕ್ತರು ಪಾದಯಾತ್ರೆಯನ್ನು ಭಕ್ತಿಯಿಂದ ಬರಮಾಡಿಕೊಂಡು ಶ್ರೀಗಳ ಪಾದಪೂಜೆ ನೆರವೇರಿಸಿದರು. ಅಲ್ಲಿ ಎಲ್ಲ ಪಾದಯಾತ್ರೆಗಳಿಗೆ ಶ್ರೀ ವಿಶ್ವಾರಾಧ್ಯರ ಶಾಖಾಮಠದಲ್ಲಿ ಪ್ರಸಾದ ನೆರವೇರಿತು.
ಹಾಗೆ ಮುಂದೆ ಸಾಗಿದ ಪಾದಯಾತ್ರೆ ಸಿರವಾಳ ಗ್ರಾಮವನ್ನು ತಲುಪಿದ ಮೇಲೆ ಆ ಗ್ರಾಮದ ಮಾಜಿ ಶಾಸಕರಾದ ಗುರುಪಾಟೀಲ ನೇತೃತ್ವದಲ್ಲಿ ಸಾಯಿಬಣ್ಣ ಶರಣರ ಹೊಲದಲ್ಲಿ ಪ್ರಸಾದ ಜರುಗಿತು.
ಅಲ್ಲಿಂದ ಹೊರಟ ಪಾದಯಾತ್ರೆ ಹುರಸಗುಂಡಗಿ ಮುಖಾಂತರ ಅಲ್ಲಿನ ಭಕ್ತರ ಸೇವೆಯನ್ನು ಸ್ವೀಕರಿಸಿ ಸನ್ನತಿ ಚಂದ್ರಲಾ ಪರಮೇಶ್ವರಿ ದೇವಸ್ಥಾನವನ್ನು ತಲುಪಿ. ಅಲ್ಲಿ ಶ್ರೀಗಳು ದೇವಿಗೆ ವಿಶೇಷ ಪೂಜೆಯನ್ನು ನೆರವೇರಿಸಿದ ನಂತರ ಎಲ್ಲರೂ ಪ್ರಸಾದ ಸ್ವೀಕರಿಸಿ ವಾಸ್ತವ್ಯ ಮಾಡಿದರು.
ಶಾಸಕರು, ಗಣ್ಯರು ಭಾಗಿ
ಶ್ರೀಗಳ ಪಾದಯಾತ್ರೆ ಚಾಲನಾ ಕಾರ್ಯಕ್ರಮದಲ್ಲಿ ಶಾಸಕರಾದ ಚನ್ನಾರೆಡ್ಡಿ ಪಾಟೀಲ್ ತುನ್ನೂರ,ಬಸವರಾಜ ಮತ್ತಿಮೂಡು,ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಮಹೇಶರೆಡ್ಡಿ ಮುದ್ನಾಳ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಬಸವರಾಜಗೌಡ ಪಾಟೀಲ್ ನರಬೋಳ, ಹಿರಿಯ ಮುಖಂಡರಾದ ಮಲ್ಲಿನಾಥಗೌಡ ಯಲಗೋಡ, ರಾಜಶೇಖರ ಸಿರಿ, ಕಾಶಿರಾಯ ಯಲಗೊಡ,ಬಾಪುಗೌಡ ಮಾಚನೂರ, ಚಂದ್ರುಗೌಡ ಕಂದಳ್ಳಿ, ತಾಯಪ್ಪ ಯಾದವ್, ಶರಣಗೌಡ ಬಲಕಲ್, ವಿಜಯಕುಮಾರ ಪೊಲೀಸ್ ಪಾಟೀಲ್, ಕಲ್ಯಾಣಕುಮಾರ ಸಂಗಾವಿ, ರಾಮಶೆಟ್ಟಿ ಹುಗ್ಗಿ, ಸಿದ್ದಣ್ಣಗೌಡ ಮಳಗಿ, ಬಿ.ಎಂ.ಪಾಟೀಲ, ಡಿವೈಎಸ್ ಪಿ ಭರತಕುಮಾರ ಇತರರಿದ್ದರು.
ಪಾದಯಾತ್ರೆಯಲ್ಲಿ ಕರ್ನಾಟಕ,ಆಂದ್ರ,ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳ ಹತ್ತಾರು ಭಕ್ತರು ಭಾಗವಹಿಸಿದ್ದರು.
ಡೊಳ್ಳು, ಬಾಜಾ ಭಜಂತ್ರಿ, ಕೋಲಾಟ, ಕೇರಳದ ವಿಶೇಷ ವಾದ್ಯತಂಡಗಳು ಪಾದಯಾತ್ರೆಗೆ ಮೆರಗು ನೀಡಿದವು.











Leave a Reply