ಯಾದಗಿರಿ : ವಿಧಾನಸೌಧದ ಮೆಟ್ಟಿಲುಗಳ ಮೇಲೆ ರಾಜ್ಯ ಸರ್ಕಾರ ಉರ್ದು ಹಬ್ಬ ಆಯೋಜಿಸುವ ನಿರ್ಧಾರ ಇದೊಂದು ಅವಿವೇಕದ, ಅಪ್ರಬುದ್ಧ, ದುರಹಂಕಾರದ ನಡೆ. ಏನು ಮಾಡಿದರೂ ನಡೆಯುತ್ತದೆ ಎಂಬ ಅಧಿಕಪ್ರಸಂಗದ ನಿಲುವುವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾದ್ಯಕ್ಷ ಟಿ.ಎನ್. ಭೀಮುನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕಾರ್ಯಕ್ರಮ ಮಾಡಲು ನಿಮಗೆ ಬೇರೆಲ್ಲೂ ಜಾಗ ಸಿಗಲಿಲ್ಲವೇ? ಎಂದು ಘರ್ಜಿಸಿದ್ದಾರೆ.
ಸರ್ಕಾರವೇ ಮುಂದೆ ನಿಂತು ಸಮಾಜದ ಸ್ವಾಸ್ತ್ಯ ವನ್ನು ಹಾಳು ಮಾಡಲು ನಿಂತ ಹಾಗೆ ಕಾಣುತ್ತಿದೆ. ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ವಾಗಿ ಖಂಡಿಸುವುದು ಮಾತ್ರವಲ್ಲ, ಈ ಕಾರ್ಯಕ್ರಮ ನಡೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಗುಡುಗಿದ್ದಾರೆ.
ಸರ್ಕಾರಕ್ಕೆ ಮಾಡಲು ಬೇಕಾದಷ್ಟು ಕೆಲಸಗಳಿವೆ. ಅವುಗಳನ್ನು ಅದು ಮಾಡಲಿ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬದ ತಲೆಹರಟೆ ನಿರ್ಧಾರ ಎಲ್ಲಿಂದ ಬಂತು? ಯಾರು ಕೇಳಿದ್ದರು? ಸ್ಪಷ್ಟವಾಗಿ ಹೇಳುವುದಾದರೆ ಕನ್ನಡಿಗರ ಮೇಲೆ ಉರ್ದು ಭಾಷಿಕರನ್ನು, ಉರ್ದು ಭಾಷಿಕರ ಮೇಲೆ ಕನ್ನಡಿಗರನ್ನು ಎತ್ತಿಕಟ್ಟುವ ಹುನ್ನಾರ ಇದು. ಜನರನ್ನು ಬೇರೆಲ್ಲ ರೀತಿಯಿಂದ ಒಡೆದು ಆಳಿದ್ದಾಯಿತು. ಈಗ ಭಾಷೆ ಹೆಸರಲ್ಲಿ ಎತ್ತಿಕಟ್ಟಿ ಒಡೆದು ಆಳಲು ಮುಂದಾಗಿತ್ತಿರುವುದು ರಾಜಕೀಯ ಲಾಭದ ದುರುದ್ದೇಶ ಹೊಂದಿರುವುದು ಎದ್ದು ಕಾಣುತ್ತಿದೆ. ಇದರಲ್ಲಿ ಯಾವುದೇ ಉರ್ದು ಭಾಷೆಯ ಏಳ್ಗೆಯ ಉದ್ದೇಶ ಎಳ್ಳಷ್ಟು ಕಾಣುತ್ತಿಲ್ಲ ಹಿಂದೆ ಉರ್ದು ವಾರ್ತೆ ಸಂಬAಧ ನಡೆದ ಕೋಮುಗಲಭೆ ಸರ್ಕಾರ ಮರೆತಿದೆಯೇ? ಎಂದು ಎಂದು ಅವರು ಗುಡುಗಿದ್ದಾರೆ.
ವಿಧಾನ ಸೌಧದ ಮುಂದೆ ಉರ್ದು ಹಬ್ಬ ಮಾಡಿದ ನಂತರ ಉರ್ದು ನುಡಿಯ ಮಗಳ ಸ್ಥಾನದಲ್ಲಿರುವ ಹಿಂದಿ ಹಬ್ಬ ಮಾಡುತ್ತಾರೆ, ನಂತರ ತಮಿಳು ಹಬ್ಬ, ತೆಲುಗು ಹಬ್ಬ, ಮರಾಠಿ ಹಬ್ಬ ಎಲ್ಲ ಮಾಡಿ ಕೊನೆಗೆ ಕರ್ನಾಟಕವನ್ನು ಕನ್ನಡೇತರರಿಗೆ ಮಾರಾಟ ಮಾಡಿಬಿಡುವ ಹುನ್ನಾರ ಇದರಲ್ಲಿ ಅಡಗಿದೆ. ರಾಜ್ಯವನ್ನು ಆಳುವವರೇ ನಿಮ್ಮ ಸ್ವಾರ್ಥಕ್ಕಾಗಿ ಕನ್ನಡಮ್ಮನ ಬಲಿ ಕೊಡಲು ಕರವೇ ಯಾವುದೇ ಪರಸ್ಥಿತಿಯಲ್ಲಿ ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಝಾಡಿಸಿದ್ದಾರೆ.
ಮುಖ್ಯ ಮಂತ್ರಿ ಡಿ. ಕೆ. ಶಿವಕುಮಾರ್ ಅವರು ಕೂಡಲೇ ಈ ಉರ್ದು ಹಬ್ಬದ ಹುಚ್ಚಾಟವನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ನಾವೇ ಈ ಸರ್ಕಾರಕ್ಕೆ ಚಳಿ ಬಿಡಿಸಬೇಕಾಗುತ್ತದೆ. ಇಂಥ ವಿವಾದ ಸೃಷ್ಟಿಸುವ ಮೂಲಕ ರಾಜ್ಯದಲ್ಲಿ ಕೋಮುಗಲಭೆಗೆ ಸಂಚು ರೂಪಿಸುತ್ತಿರುವವರನ್ನು ಸರ್ಕಾರ ದೂರ ಇಡಬೇಕು.
ನಾವು ಉರ್ದು ಸೇರಿದಂತೆ ಯಾವುದೇ ಭಾಷೆಯ ವಿರೋಧಿಗಳಲ್ಲ. ಉರ್ದು ಹಬ್ಬ ಮಾಡಲು ಬೆಂಗಳೂರಿನಲ್ಲಿ ಬೇಕಾದಷ್ಟು ಜಾಗಗಳಿವೆ. ನಾಡಿನ ಶಕ್ತಿಸೌಧ ವಿಧಾನಸೌಧವೇ ಬೇಕಾಗಿಲ್ಲ. ರಾಜ್ಯ ಸರ್ಕಾರವೇ ಮುಂದೆ ನಿಂತು ನಾಡಿನ ನೆಮ್ಮದಿಯನ್ನು, ಸೌಹಾರ್ದವನ್ನು ಹಾಳುಗೆಡಹಲು ನಿಂತರೆ ನಾವು ಸುಮ್ಮನಿರುವುದಿಲ್ಲ. ಸರ್ಕಾರ ಏನಾದರೂ ತಾನು ಮಾಡಿದ್ದೆ ಸರಿ ಎಂದು ದುಸ್ಸಾಹಸಕ್ಕೆ ಇಳಿದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ವೆಂಕಟೇಶ ನಾಯಕ ಬೈರಿಮಡ್ಡಿ, ಅಬ್ದುಲ್ ಚಿಗಾನೂರ, ಅಂಬ್ರೇಶ್ ಕಟ್ಟಿಮನಿ, ಬಸವರಾಜ ಚೆನ್ನೂರು, ನಿಂಗಪ್ಪ ಗುಡಗುಡಿ ಸೇರಿ ಅನೇಕರು ಎಚ್ಚರಿಕೆ ನೀಡಿದ್ದಾರೆ.
Leave a Reply