ನ.6ರಂದು ಯಾದಗಿರಿ ಜಿಲ್ಲಾ ಬಂದ್‌ಗೆ ಸರ್ವ ಸಂಘಟನೆಗಳ ಕರೆ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಜಿಲ್ಲೆಯ ರೈತರ ಹಿತ ಕಾಪಾಡುವ ಉದ್ದೇಶದಿಂದ ನವೆಂಬರ್ 30ರವರೆಗೆ ನಿರಂತರವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿ, ನವೆಂಬರ್ 6ರಂದು ಯಾದಗಿರಿ ಜಿಲ್ಲಾ ಬಂದ್ ನಡೆಸಲು ಸರ್ವ ಸಂಘಟನೆಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರದ ಹಳೆ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ವಿವಿಧ ಕನ್ನಡಪರ, ರೈತಪರ, ದಲಿತಪರ ಹಾಗೂ ಮಾನವ ಹಕ್ಕುಗಳ ಪರ ಸಂಘಟನೆಗಳ ಮುಖಂಡರು ಭಾಗವಹಿಸಿ, ರೈತರ ವಿಚಾರದಲ್ಲಿ ಸರ್ಕಾರದ ನಿಲುವನ್ನು ಖಂಡಿಸಿದರು.

ರೈತರ ಹಿತಕ್ಕಾಗಿ ನಡೆಯಲಿರುವ ಬಂದ್‌ಗೆ ಪಕ್ಷಾತೀತವಾಗಿ ಎಲ್ಲ ಆಡಳಿತ ಹಾಗೂ ವಿರೋಧ ಪಕ್ಷಗಳ ನಾಯಕರು, ಮುಖಂಡರು ಹಸಿರು ಶಾಲು ಧರಿಸಿ ಭಾಗವಹಿಸಿ ರೈತಪರ ಕಾಳಜಿ ಪ್ರದರ್ಶಿಸಬೇಕು ಎಂದು ಮುಖಂಡರು ಮನವಿ ಮಾಡಿದರು. ವಿದ್ಯಾರ್ಥಿಗಳು, ಯುವಕರು, ಸಾಹಿತಿಗಳು, ಚಿಂತಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸಹ ಬಂದ್‌ಗೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.

ನೀರು ಹರಿಸುವುದು ಸ್ಥಗಿತಗೊಳಿಸಿರುವ ಕ್ರಮಕ್ಕೆ ಆಕ್ರೋಶ

ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಮಾತನಾಡಿ, ರೈತರ ಮುಂಗಾರು ಹಂಗಾಮಿನ ಬೆಳೆಗಳು ಕೈಗೆ ಬಂದಿದ್ದು, ಫಸಲು ಬಾಯಿಗೆ ಬರುವ ಹಂತದಲ್ಲಿರುವಾಗಲೇ ನೀರು ಹರಿಸುವುದನ್ನು ಸ್ಥಗಿತಗೊಳಿಸಿರುವುದು ಅವೈಜ್ಞಾನಿಕ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಗಮನ ಸೆಳೆದು ರೈತರ ಹಿತ ಕಾಪಾಡಲು ಜಿಲ್ಲಾ ಬಂದ್ ಅನಿವಾರ್ಯವಾಗಿದೆ ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ ಉಮೇಶ ಮುದ್ನಾಳ ಮಾತನಾಡಿ, ರೈತರ ಹಿತಕ್ಕಾಗಿ ಜಿಲ್ಲೆಯ ಎಲ್ಲ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಹೋರಾಟಕ್ಕೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೆರಕರ್ ಮಾತನಾಡಿ, ರೈತರಿಗೆ ಅನ್ಯಾಯವಾಗುವುದನ್ನು ದಲಿತ ಸಂಘಟನೆಗಳು ಸಹಿಸುವುದಿಲ್ಲ. ಜಿಲ್ಲೆಯ ಎಲ್ಲ ದಲಿತಪರ ಸಂಘಟನೆಗಳು ಬಂದ್‌ಗೆ ಬೆಂಬಲಿಸಿ ರೈತರೊಂದಿಗೆ ನಾವಿದ್ದೇವೆ ಎಂಬ ಸಂದೇಶ ನೀಡಬೇಕು ಎಂದು ಹೇಳಿದರು.

ಇನ್ನೋರ್ವ ದಸಂಸ ಜಿಲ್ಲಾ ಸಂಚಾಲಕ ಶರಣು ನಾಟೇಕರ್ ಮಾತನಾಡಿ, ಒಂದು ಕಡೆ ಬರಗಾಲ, ಮತ್ತೊಂದೆಡೆ ರೈತರ ಬೆಳೆಗೆ ನೀರು ಬಿಡದ ಸರ್ಕಾರದ ನಿಲುವಿನ ವಿರುದ್ಧ ಬಂದ್ ನಡೆಸಿ ಹೋರಾಟ ಮಾಡೋಣ. ಇದಕ್ಕೆ ಜಿಲ್ಲೆಯ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ರೈತರು, ರೈತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ ಮುಷ್ಟೂರು ಮಾತನಾಡಿ, ಅನ್ನದಾತರಿಗೆ ಅನ್ಯಾಯವಾಗುತ್ತಿರುವ ಸಂದರ್ಭದಲ್ಲಿ ಎಲ್ಲ ಸಂಘಟನೆಗಳು ಬೆಂಬಲಕ್ಕೆ ನಿಂತಿವೆ. ರೈತಪರ ಸಂಘಟನೆಗಳ ಮುಖಂಡರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನವೆಂಬರ್ 6ರ ಜಿಲ್ಲಾ ಬಂದ್ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ರೈತ ಸಂಘದ ನಾಯಕಿ ರುದ್ರಾಂಬಿಕಾ ಪಾಟೀಲ್ ಮಾತನಾಡಿ, ರೈತರು ಹಾಗೂ ರೈತ ಮಹಿಳೆಯರು ಹೋರಾಟದಲ್ಲಿ ಭಾಗವಹಿಸಿ ಬಂದ್ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ರೈತರಿಗೆ ನೀರು ಸಿಗುವವರೆಗೆ ಹಾಗೂ ಮುಂದಿನ ದಿನಗಳಲ್ಲಿಯೂ ರೈತರ ಹಿತಕ್ಕಾಗಿ ಎಲ್ಲರೂ ಒಗ್ಗೂಡಿ ಹೋರಾಟ ನಡೆಸಲು ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಒಮ್ಮತದಿಂದ ತೀರ್ಮಾನಿಸಿದರು.

ಸಭೆಯಲ್ಲಿ ಕರವೇ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಸಿದ್ದುರೆಡ್ಡಿ ತಂಗಡಗಿ, ಆಟೋ ಚಾಲಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸಾಂಗ್ಲಿಯಾನ, ಟಿಪ್ಪರ್ ಮಾಲೀಕರ ಸಂಘದ ಅಧ್ಯಕ್ಷ ರಘುಪತಿ ಗೌಡಗೇರಿ, ಶಶಾಂಕ ನಾಲಡಿಗಿ, ಸೋಫಿ, ಸೊಯೆಬ್, ರೈತ ಸಂಘದ ಅಧ್ಯಕ್ಷ ವಿಜಯ ಭಾರತ, ವಿಜಯ ಕರ್ನಾಟಕ ಕನ್ನಡಿಗರ ವೇದಿಕೆಯ ನಾಗೇಂದ್ರ ರಾಯಚೂರಕರ್, ದಸಂಸ ಮುಖಂಡ ಸೈದಪ್ಪ ಕೂಲೂರು, ಬಂಜಾರ ಸಂಘದ ಜಿಲ್ಲಾಧ್ಯಕ್ಷ ಬಂಗಾರು ಜೆ.ಬಿ. ರಾಠೋಡ, ಮಹಾದೇವ ಕಣೇಕಲ್, ದೇವಪ್ಪಗೌಡ ರಾಂಪುರ, ದಸಂಸದ ಜಾಫರ್ ಹುಸೇನ್ (ಸದ್ದಾಂ), ಮಾದಿಗ ದಂಡೋರದ ಚಂದ್ರಶೇಖರ ಕಡೆಸೂರ, ಭೀಮಪ್ಪ ಕಾಗಿ, ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

↑
Suddi Belaku