ರಾಯಚೂರು ಮಹಿಳಾ ಕಾಲೇಜಿನಲ್ಲಿ ಇಂಗ್ಲಿಷ್ ಭಾಷೆ ಕುರಿತು ವಿಶೇಷ ಉಪನ್ಯಾಸ

Posted by

–

ಸುದ್ದಿ ಬೆಳಕು ವಾರ್ತೆ

ರಾಯಚೂರು : ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ರಾಯಚೂರಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಅಡಿಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನವೆಂಬರ್ 2ರಂದು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಎಲ್.ವಿ.ಡಿ. ಕಾಲೇಜಿನ ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೀಪ್ ಕರಭರಿ ಅವರು “Importance of Spoken English and Job Opportunities” ವಿಷಯದ ಕುರಿತು ಉಪನ್ಯಾಸ ನೀಡಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಭಾಷೆಯ ಜ್ಞಾನ ಹಾಗೂ ಸಂವಹನ ಕೌಶಲಗಳು ಅತ್ಯಂತ ಮಹತ್ವದ್ದಾಗಿವೆ. ಪರಿಣಾಮಕಾರಿ ಸಂವಹನವು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜತೆಗೆ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗಿದೆ ಎಂದು ಅವರು ಹೇಳಿದರು.

ಉದ್ಯೋಗ ಸಂದರ್ಶನಗಳು, ಗುಂಪು ಚರ್ಚೆಗಳು ಹಾಗೂ ವೃತ್ತಿಪರ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಲು ಇಂಗ್ಲಿಷ್ ಭಾಷೆಯ ಜ್ಞಾನ ಅಗತ್ಯವಾಗಿದೆ. ವಿದ್ಯಾರ್ಥಿಗಳು ಭಾಷೆಯ ಬಳಕೆಯನ್ನು ನಿರಂತರವಾಗಿ ಅಭ್ಯಾಸ ಮಾಡುವ ಮೂಲಕ ತಮ್ಮ ಸಂವಹನ ಕೌಶಲವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರತಿದಿನ ಇಂಗ್ಲಿಷ್ ಮಾತನಾಡುವ ಅಭ್ಯಾಸ ಮಾಡಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಗುಣ ಬಸವರಾಜ ಮಾತನಾಡಿ, ಕಾಲೇಜುಗಳಲ್ಲಿ ಇಂತಹ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುವುದು ಬಹುಮುಖ್ಯವಾಗಿದೆ ಎಂದು ಹೇಳಿದರು.

ವಿದ್ಯಾರ್ಥಿನಿಯರು ಪ್ರತಿದಿನ ಇಂಗ್ಲಿಷ್ ಮಾತನಾಡುವ ಅಭ್ಯಾಸ ಮಾಡಬೇಕು. ದಿನಪತ್ರಿಕೆಗಳನ್ನು ಓದಬೇಕು, ಹೊಸ ಪದಗಳನ್ನು ಕಲಿಯಬೇಕು ಹಾಗೂ ಚರ್ಚೆ ಮತ್ತು ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಇಂಗ್ಲಿಷ್ ಮಾತನಾಡುವ ಸಂದರ್ಭದಲ್ಲಿ ಹಿಂಜರಿಕೆಯನ್ನು ಬಿಟ್ಟು ಆತ್ಮವಿಶ್ವಾಸದಿಂದ ಮಾತನಾಡುವಂತೆ ವಿದ್ಯಾರ್ಥಿನಿಯರನ್ನು ಪ್ರೇರೇಪಿಸಿದರು.

ಕಾರ್ಯಕ್ರಮದಲ್ಲಿ IQAC ಸಂಚಾಲಕರಾದ ಡಾ. ಜ್ಯೋತಿ ಸಿ.ಕೆ., ಸಹ ಪ್ರಾಧ್ಯಾಪಕರು, ಭೌತಶಾಸ್ತ್ರ ವಿಭಾಗ, ಪ್ರಾಸ್ತಾವಿಕವಾಗಿ ಮಾತನಾಡಿದರು. IQAC ಸಹ ಸಂಚಾಲಕರಾದ ಶರಣಗೌಡ ಕೆ., ಸಹಾಯಕ ಪ್ರಾಧ್ಯಾಪಕರು, ಗಣಕವಿಜ್ಞಾನ ವಿಭಾಗ, ಸಂಪನ್ಮೂಲ ವ್ಯಕ್ತಿ ಸಂದೀಪ್ ಕರಭರಿ ಅವರನ್ನು ಪರಿಚಯಿಸಿದರು.

ಸಹ ಪ್ರಾಧ್ಯಾಪಕರಾದ ಡಾ. ಸೈಯಿದಾ ರಷೀದಾ ಪರವಿನ್, ಡಾ. ಸ್ವರೂಪರಾಣಿ, ಡಾ. ಉಮಾದೇವಿ, ಶ್ರೀಮತಿ ಸುಮಿತ್ರಾ ಪ್ಯಾಟಿ, ಸಹಾಯಕ ಪ್ರಾಧ್ಯಾಪಕರಾದ ಡಾ. ಸಂತೋಷಕುಮಾರ, ಡಾ. ಚನ್ನಬಸವ, ಡಾ. ಅಸ್ಮಾ, ಡಾ. ಪ್ರಸನ್ನಕುಮಾರ, ದೈಹಿಕ ಶಿಕ್ಷಣ ನಿರ್ದೇಶಕರು, ಡಾ. ಸುರೇಶ ಪಾಟೀಲ್, ಗ್ರಂಥಪಾಲಕರು ಹಾಗೂ ಅತಿಥಿ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶ್ರೀ ರಂಗನಾಥ ಬಿಲ್ಲಾರ್ ಕಾರ್ಯಕ್ರಮ ನಿರೂಪಿಸಿದರು. ಕು. ಶಾಂತಲಾ ಅತಿಥಿಗಳನ್ನು ಸ್ವಾಗತಿಸಿದರು. ಡಾ. ಚನ್ನಬಸವ ವಂದಿಸಿದರು. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿನಿಯರು ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಯಾಯಿತು.

Leave a Reply

Your email address will not be published. Required fields are marked *

↑
Suddi Belaku