
ಯಾದಗಿರಿ : ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಯಾದಗಿರಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ಸ್ವಾತಂತ್ರ್ಯೋತ್ಸವವನ್ನು ಗೌರವಪೂರ್ವಕವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮರುಳಾಸಿದ್ದಾರಾಧ್ಯ ಹೆಚ್.ಜೆ. ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಬಳಿಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸಿದರು.
ಮಾತನಾಡಿದ ಅವರು, ಸ್ವಾತಂತ್ರ್ಯವೆಂದರೆ ಕೇವಲ ಪರಕೀಯ ಆಡಳಿತದಿಂದ ಮುಕ್ತಿಯಾಗುವುದಲ್ಲ. ಸಂವಿಧಾನದ ಆಶಯಗಳನ್ನು ಗೌರವಿಸಿ, ಕಾನೂನಿನ ಚೌಕಟ್ಟಿನಲ್ಲಿ ತಮ್ಮ ಕರ್ತವ್ಯ ನಿರ್ವಹಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಯುವಜನತೆ ದೇಶದ ಭವಿಷ್ಯವಾಗಿದ್ದು, ಶಿಸ್ತು, ಪ್ರಾಮಾಣಿಕತೆ, ದೇಶಭಕ್ತಿ ಹಾಗೂ ಸಂವಿಧಾನಾತ್ಮಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಲಯದ ಎಲ್ಲ ಗೌರವಾನ್ವಿತ ನ್ಯಾಯಾಧೀಶರು, ನ್ಯಾಯಾಂಗ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಮಾಜಿ ಸೈನಿಕರು, ಪತ್ರಕರ್ತರು ಹಾಗೂ ನಗರಸಭೆ ಸಿಬ್ಬಂದಿಗೆ ಸನ್ಮಾನ
ಸ್ವಾತಂತ್ರ್ಯ ದಿನಾಚರಣೆಯ ವಿಶೇಷವಾಗಿ ದೇಶದ ರಕ್ಷಣೆಯಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಮಾಜಿ ಸೈನಿಕರನ್ನು, ಸಮಾಜಕ್ಕೆ ನಿಖರ ಮಾಹಿತಿಯನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪತ್ರಿಕಾ ವರದಿಗಾರರು ಹಾಗೂ ಸಂಪಾದಕರನ್ನು ಹಾಗೂ ನಗರವನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿಡಲು ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ನಗರಸಭೆ ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ನಗರಸಭೆ ಸಿಬ್ಬಂದಿಯ ಸೇವೆಯನ್ನು ಗುರುತಿಸಿ ಗೌರವಿಸುವ ಮೂಲಕ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಪ್ರತಿಯೊಬ್ಬರ ಪರಿಶ್ರಮಕ್ಕೂ ಗೌರವ ನೀಡಬೇಕು ಎಂಬ ಸಂದೇಶವನ್ನು ಕಾರ್ಯಕ್ರಮದಲ್ಲಿ ಸಾರಲಾಯಿತು.
ದೇಶಭಕ್ತಿ, ಸಂವಿಧಾನ ಬದ್ಧತೆ, ನ್ಯಾಯದ ಆಶಯ, ಸಾರ್ವಜನಿಕ ಸೇವೆ ಹಾಗೂ ಸಾಮಾಜಿಕ ಜವಾಬ್ದಾರಿಯ ಸಂದೇಶ ಸಾರುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಅರ್ಥಪೂರ್ಣವಾಗಿ ನೆರವೇರಿತು.












Leave a Reply