
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಇದೇ ಸೆಪ್ಟೆಂಬರ್ ೧೭ ರಂದು ನಗರದಲ್ಲಿ ‘ಶ್ರೀ ವಿಶ್ವಕರ್ಮ ಜಯಂತಿ’ಯನ್ನು ಅತ್ಯಂತ ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶ್ರೀ ವಿಶ್ವಕರ್ಮ ಜಯಂತಿ ಆಚರಣೆಯ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರರು/ಕಚೇರಿ ಸಹಾಯಕ (ಒ.ಎ) ಹುಲಿನಾಯಕ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಸೆಪ್ಟೆಂಬರ್ ೧೭ ರಂದು ಮಧ್ಯಾಹ್ನ ೨:೦೦ ಗಂಟೆಗೆ ನಗರದ ಸರ್ಕಾರಿ ಪದವಿ ಕಾಲೇಜು ಸಭಾಂಗಣದಲ್ಲಿ ಮುಖ್ಯ ಸಮಾರಂಭವನ್ನು ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಮಾರಂಭದಲ್ಲಿ ಶ್ರೀ ವಿಶ್ವಕರ್ಮ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಗುವುದು. ಕಾರ್ಯಕ್ರಮಕ್ಕೆ ಶಿಷ್ಟಾಚಾರದ ಅನ್ವಯ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಗಣ್ಯರನ್ನು ಆಹ್ವಾನಿಸುವುದು, ಆಸನ ವ್ಯವಸ್ಥೆ ಹಾಗೂ ವೇದಿಕೆ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಚರ್ಚಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಚೇರಿ ಸಹಾಯಕ ಹುಲಿನಾಯಕ್, “ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸೂಕ್ತ ಪೊಲೀಸ್ ಬಂದೋಬಸ್ತ್, ಆಮಂತ್ರಣ ಪತ್ರಿಕೆಗಳ ಸಮರ್ಪಕ ವಿತರಣೆ ಹಾಗೂ ವೇದಿಕೆ ನಿರ್ವಹಣೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಜತೆಗೆ, ಜಿಲ್ಲಾ ಕೇಂದ್ರದ ಮುಖ್ಯ ಸಮಾರಂಭ ಮಾತ್ರವಲ್ಲದೆ ತಾಲ್ಲೂಕು ಮಟ್ಟದಲ್ಲಿ, ಶಾಲಾ-ಕಾಲೇಜುಗಳಲ್ಲಿ, ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಶ್ರೀ ವಿಶ್ವಕರ್ಮ ಜಯಂತಿಯನ್ನು ಆಚರಿಸಬೇಕು,” ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮೆರವಣಿಗೆ ಆಯೋಜಿಸುವುದಾದಲ್ಲಿ ಅದರ ಸಂಪೂರ್ಣ ಮಾರ್ಗ ಹಾಗೂ ವಿವರಗಳನ್ನು ಮುಂಚಿತವಾಗಿಯೇ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಲಿಖಿತವಾಗಿ ಮಾಹಿತಿ ನೀಡುವಂತೆ ಸಮಾಜದ ಮುಖಂಡರಿಗೆ ತಿಳಿಸಿದರು.
ಸಭೆಯಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಮಹೇಶ್ ತಡಿಬಿಡಿ, ಜಿಲ್ಲಾ ಗೌರವಾಧ್ಯಕ್ಷ ಶಿವಣ್ಣ ಊನೂರು, ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ ಬಡಿಗೇರ್, ಪ್ರಮುಖರಾದ ಕೃಷ್ಣಯ್ಯ ಬಡಿಗೇರ್, ಬನ್ನಪ್ಪ ವಿಶ್ವಕರ್ಮ, ಪಾರ್ವತಮ್ಮ ವಿಶ್ವಕರ್ಮ, ಹನುಮಂತರಾಯ ವಿಶ್ವಕರ್ಮ, ಚಂದ್ರಶೇಖರ ಬಡಿಗೇರ್, ಮಂಜುನಾಥ್, ಮರೆಪ್ಪ, ಮೋನಪ್ಪ, ಶರಣು, ಮೌನೇಶ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.












Leave a Reply