
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿರುವ ಬೆಂಗಳೂರು-ಮುAಬೈ ವಂದೇ ಭಾರತ್ ಸ್ಲೀಪರ್ ಎಸಿ ರೈಲನ್ನು ಗುಂತಕಲ್, ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಮಾರ್ಗದಲ್ಲೇ ಕಡ್ಡಾಯವಾಗಿ ಓಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಜಿಲ್ಲಾ ಘಟಕವು ದಕ್ಷಿಣ ಮಧ್ಯ ರೈಲ್ವೆ ವಲಯದ ಸಿಕಂದರಾಬಾದ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ (ಡಿಆರ್‌ಎಂ) ಪ್ರಬಲ ಆಗ್ರಹ ಮಂಡಿಸಿದೆ.
ನಗರದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ್ದ ಡಿಆರ್‌ಎಂ ಡಾ. ಆರ್. ಗೋಪಾಲಕೃಷ್ಣನ್ ಅವರಿಗೆ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಅವರ ನೇತೃತ್ವದ ನಿಯೋಗವು ಸಮಗ್ರ ಹಕ್ಕೊತ್ತಾಯದ ಮನವಿ ಪತ್ರ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ, “ಬೆಂಗಳೂರು-ಮುAಬೈ ವಂದೇ ಭಾರತ್ ಸ್ಲೀಪರ್ ರೈಲು ಆರಂಭದಲ್ಲಿ ಯಾದಗಿರಿ ಮಾರ್ಗದಲ್ಲೇ ಚಲಿಸುವ ಪ್ರಸ್ತಾವನೆ ಹೊಂದಿತ್ತು. ಆದರೆ ಈಗ ಕಾರಣಾಂತರಗಳಿAದ ಹುಬ್ಬಳ್ಳಿ ಮಾರ್ಗದಲ್ಲಿ ಓಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಕೇಳಿಬರುತ್ತಿದೆ. ಇದು ಕಲ್ಯಾಣ ಕರ್ನಾಟಕ ಭಾಗದ ಜನತೆಗೆ ಎಸಗುವ ಮಹಾ ದ್ರೋಹ. ಯಾದಗಿರಿ, ಕಲಬುರಗಿ ಹಾಗೂ ರಾಯಚೂರು ಭಾಗದಿಂದ ಮುಂಬೈ ಮತ್ತು ರಾಜಧಾನಿ ಬೆಂಗಳೂರಿಗೆ ಪ್ರತಿನಿತ್ಯ ಸಾವಿರಾರು ವ್ಯಾಪಾರಿಗಳು, ಉದ್ಯಮಿಗಳು ಹಾಗೂ ಸಾರ್ವಜನಿಕರು ಸಂಚರಿಸುತ್ತಾರೆ. ಈ ಮಾರ್ಗದಲ್ಲಿ ರೈಲು ಓಡಿಸಿದರೆ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ಮೂರೂ ರಾಜ್ಯಗಳ ಜನರಿಗೆ ಅಪಾರ ಅನುಕೂಲವಾಗಲಿದೆ,” ಎಂದು ಪ್ರತಿಪಾದಿಸಿದರು.
12 ರೈಲುಗಳ ನಿಲುಗಡೆ ಹಾಗೂ ನಿಲ್ದಾಣ ಮೇಲ್ದರ್ಜೆಗೆ ಪಟ್ಟು:
“ಸಿಕಂದರಾಬಾದ್ ವಿಭಾಗದಲ್ಲಿ ಯಾದಗಿರಿ ರೈಲ್ವೆ ನಿಲ್ದಾಣವು ಎರಡನೇ ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆ ಹೊಂದಿರುವ ಹಾಗೂ ದಿನಕ್ಕೆ ₹5 ರಿಂದ ₹6 ಲಕ್ಷಕ್ಕೂ ಅಧಿಕ ಆದಾಯ ತಂದುಕೊಡುವ ಪ್ರಮುಖ ನಿಲ್ದಾಣವಾಗಿದೆ. ಕೇಂದ್ರ ಸರ್ಕಾರ ಯಾದಗಿರಿಯನ್ನು ಮಹತ್ವಾಕಾಂಕ್ಷೆಯ ಜಿಲ್ಲೆ ಎಂದು ಘೋಷಿಸಿ 16 ವರ್ಷಗಳೇ ಸಂದಿದ್ದರೂ ನಿಲ್ದಾಣದಲ್ಲಿ ಕನಿಷ್ಠ ಮೂಲಸೌಕರ್ಯಗಳಿಲ್ಲ. ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಈ ಭಾಗದ ಜನತೆಗೆ ಅನ್ಯಾಯವಾಗುತ್ತಿದೆ. ದಿನಂಪ್ರತಿ ಹಾಗೂ ವಾರಕ್ಕೊಮ್ಮೆ ಹಾದುಹೋಗುವ ಪದ್ಮಾವತಿ ಎಕ್ಸ್ಪ್ರೆಸ್ (12731/12732), ರಾಜಕೋಟ್ ಎಕ್ಸ್ಪ್ರೆಸ್ (16613/16641), ದ್ವಾರಕಾ ಎಕ್ಸ್ಪ್ರೆಸ್ (19567/19568), ವಾಸ್ಕೊ ಎಕ್ಸ್ಪ್ರೆಸ್ (17321/17322), ಏಕತಾನಗರ ಎಕ್ಸ್ಪ್ರೆಸ್ (20919/20920), ಸಾಯಿನಗರ ಶಿರಡಿ ಎಕ್ಸ್ಪ್ರೆಸ್ (22601/22602), ಅಹ್ಮದಾಬಾದ್ ಎಕ್ಸ್ಪ್ರೆಸ್ (22689/22690), ಮಧುರೈ ಎಕ್ಸ್ಪ್ರೆಸ್ (22101/22102), ತಿರುಪತಿ ಹಮ್‌ಸಫರ್ (22705/22706), ಗೋರಖ್‌ಪುರ ಎಕ್ಸ್ಪ್ರೆಸ್ (22533/22534), ಅಹ್ಮದಾಬಾದ್ ಹಮ್‌ಸಫರ್ (22191/22920) ಹಾಗೂ ಗೋರಖ್‌ಪುರ ಎಕ್ಸ್ಪ್ರೆಸ್ (12591/12592) ಸೇರಿದಂತೆ ಒಟ್ಟು 12 ಪ್ರಮುಖ ರೈಲುಗಳಿಗೆ ಯಾದಗಿರಿಯಲ್ಲಿ ನಿಲುಗಡೆ ಒದಗಿಸಬೇಕು,” ಎಂದು ಒತ್ತಾಯಿಸಿದರು.
ರೈಲ್ವೆ ಇಲಾಖೆಗೆ ಹೋರಾಟದ ಎಚ್ಚರಿಕೆ:
ಕೋವಿಡ್ ಸಂದರ್ಭದಲ್ಲಿ ರದ್ದುಗೊಂಡಿದ್ದ ಸೋಲಾಪುರ-ರಾಯಚೂರು ಇಂಟರ್‌ಸಿಟಿ ರೈಲನ್ನು ಪುನರಾರಂಭಿಸಬೇಕು, ಕಲಬುರಗಿಯಿಂದ ಬೆಂಗಳೂರಿಗೆ ಸೂಪರ್‌ಫಾಸ್ಟ್ ಪ್ಯಾಸೆಂಜರ್ ರೈಲು ಪ್ರಾರಂಭಿಸಬೇಕು ಹಾಗೂ ಯಾದಗಿರಿ ನಿಲ್ದಾಣವನ್ನು ಹಾಲಿ ‘ಸಿ’ ದರ್ಜೆಯಿಂದ ‘ಬಿ’ ಗ್ರೇಡ್‌ಗೆ ಮೇಲ್ದರ್ಜೆಗೇರಿಸಬೇಕು ಎಂದು ನಿಯೋಗ ಒತ್ತಾಯಿಸಿತು. ಒಂದು ವೇಳೆ ವಂದೇ ಭಾರತ್ ರೈಲಿನ ಮಾರ್ಗ ಬದಲಾಯಿಸಿದರೆ ಕಲ್ಯಾಣ ಕರ್ನಾಟಕ ಭಾಗದ ಜನತೆಯನ್ನು ಒಗ್ಗೂಡಿಸಿ ಉಗ್ರ ರೈಲ್ ರೋಕೋ ಹೋರಾಟ ನಡೆಸಲಾಗುವುದು; ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ರೈಲ್ವೆ ಇಲಾಖೆಯೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.
ನಿಯೋಗದಲ್ಲಿ ಮುಖಂಡರಾದ ಮಲ್ಲು ಮಾಳಿಕೇರಿ, ಸಿದ್ದುನಾಯಕ ಹತ್ತಿಕುಣಿ, ಅಂಬ್ರೇಶ ಹತ್ತಿಮನಿ, ಅಬ್ದುಲ್ ಚಿಗಾನೂರ್, ನಿಂಗಪ್ಪ ಗುಡಗಡಿ, ವಿಶ್ವರಾಜ್ ಪಾಟೀಲ್, ಸಿದ್ದಪ್ಪ ಕೂಯಿಲೂರ, ಭೀಮರಾಯ ರಾಮಸಮುದ್ರ, ಹಣಮಂತ ತೇಕರಾಳ, ಅಶೋಕ ನಾಯಕ, ನಾಗು ತಾಂಡರೂಕರ್, ಮಹೇಶ ಠಾಣಗುಂದಿ, ರವಿ ಜಮ್ಮಾರ್, ವೆಂಕಟರೆಡ್ಡಿ ಕೌಳೂರು, ಶರಣು ತಿಂಥಣಿ, ಕಾಶಿನಾಥ ನಾನೇಕರ್, ಶರಣುಗೌಡ ರಾಮಸಮುದ್ರ, ಮಂಜುನಾಥ, ನಾಗರಾಜ ಪಿಲ್ಲಿ, ತಿಮ್ಮಣ್ಣ ಕಟ್ಟಿಮನಿ, ಸಾಬು ಕೂಡ್ಲೂರು, ಮರೆಪ್ಪ ಕಡ್ಡಿ, ಸಾಬು ಪೂಜಾರಿ, ನಾಗಪ್ಪ ನಕ್ಕಲ್, ಶರಣು ಹಬ್ಬಳ್ಳಿ, ರವಿ ಗಡ್ಡೆಸೂಗೂರು, ರಮೇಶ ಡಿ. ನಾಯಕ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.












Leave a Reply