ರೈತರಿಗೆ ಮಹತ್ವದ ಮಾಹಿತಿ: ಪಿಎಂ ಕಿಸಾನ್ ಇ-ಕೆವೈಸಿ ಪೂರ್ಣಗೊಳಿಸಲು: ಸಾಹುಕಾರ ಮನವಿ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಗೆ ತಂದಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿ ಅರ್ಹ ರೈತರಿಗೆ ಕಂತಿನ ಹಣ ನೇರವಾಗಿ ಖಾತೆಗೆ ಜಮೆಯಾಗಲು ಇ-ಕೆವೈಸಿ (e-KYC) ಪೂರ್ಣಗೊಳಿಸುವುದು ಅಗತ್ಯವಾಗಿದೆ. ಆದ್ದರಿಂದ ರೈತರು ಯಾವುದೇ ವಿಳಂಬ ಮಾಡದೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬೇಕು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀಧರ ಸಾಹುಕಾರ ಮನವಿ ಮಾಡಿದ್ದಾರೆ.

ರೈತರು ತಮ್ಮ ಸಮೀಪದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಸಿಎಸ್‌ಸಿ ಡಿಜಿಟಲ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ (ಬೆರಳಚ್ಚು) ದೃಢೀಕರಣದ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳಬಹುದು. ಅಗತ್ಯವಿದ್ದಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಹಿತಿ ಹಾಗೂ ನೆರವು ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

ಮೊಬೈಲ್‌ನಲ್ಲೇ ಇ-ಕೆವೈಸಿ ಪೂರ್ಣಗೊಳಿಸಲು ಅವಕಾಶ ರೈತರು ಸೈಬರ್ ಕೆಫೆ ಅಥವಾ ಸೇವಾ ಕೇಂದ್ರಗಳಿಗೆ ತೆರಳುವ ಅಗತ್ಯವಿಲ್ಲದೆ, ತಮ್ಮ ಮೊಬೈಲ್‌ನಲ್ಲೇ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬಹುದಾಗಿದೆ.

ಮೊಬೈಲ್ ಬ್ರೌಸರ್‌ನಲ್ಲಿ ಅಧಿಕೃತ PM-KISAN ಜಾಲತಾಣ ತೆರೆಯಬೇಕು. ಮುಖಪುಟದಲ್ಲಿರುವ Farmers Corner ವಿಭಾಗಕ್ಕೆ ತೆರಳಿ e-KYC ಆಯ್ಕೆ ಮಾಡಬೇಕು. ಬಳಿಕ ಆಧಾರ್ ಸಂಖ್ಯೆ ನಮೂದಿಸಿ, ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬಂದ OTP ದಾಖಲಿಸಿ Submit For Authentication ಆಯ್ಕೆ ಮಾಡಬೇಕು. “e-KYC is Successfully Submitted” ಎಂಬ ಸಂದೇಶ ಬಂದರೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದರ್ಥ.

ಆಧಾರ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರದ ಅಥವಾ OTP ಪಡೆಯಲು ಸಾಧ್ಯವಾಗದ ರೈತರು PM-KISAN ಹಾಗೂ AadhaarFaceRd ಆ್ಯಪ್‌ಗಳನ್ನು ಬಳಸಿಕೊಂಡು ಮುಖ ಚಹರೆ ದೃಢೀಕರಣದ ಮೂಲಕ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳಬಹುದು. ಇದಕ್ಕಾಗಿ Beneficiary Login ಮೂಲಕ ಪ್ರವೇಶಿಸಿ ಮೊಬೈಲ್ ಕ್ಯಾಮೆರಾದಲ್ಲಿ ಮುಖದ ಸ್ಕ್ಯಾನ್ ಮಾಡುವ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ.

ಇ-ಕೆವೈಸಿ ಪೂರ್ಣಗೊಳಿಸುವ ಸಂದರ್ಭದಲ್ಲಿ ರೈತರು ತಮ್ಮ ಆಧಾರ್ ವಿವರಗಳು, ಸಕ್ರಿಯ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ (NPCI/Aadhaar Seeding) ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಶ್ರೀಧರ ಸಾಹುಕಾರ ತಿಳಿಸಿದ್ದಾರೆ.

ರೈತರ ಕಲ್ಯಾಣ ಹಾಗೂ ಆರ್ಥಿಕ ಭದ್ರತೆಗಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಪ್ರಯೋಜನ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ತಲುಪಬೇಕು. ತಾಂತ್ರಿಕ ಅಥವಾ ದಾಖಲೆ ಸಂಬಂಧಿತ ಕಾರಣಗಳಿಂದ ಯಾವುದೇ ಅರ್ಹ ರೈತರು ಸೌಲಭ್ಯದಿಂದ ವಂಚಿತರಾಗಬಾರದು. ಈ ಹಿನ್ನೆಲೆಯಲ್ಲಿ ರೈತ ಬಾಂಧವರು ಕೂಡಲೇ ಇ-ಕೆವೈಸಿ ಪೂರ್ಣಗೊಳಿಸಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.

Leave a Reply

Your email address will not be published. Required fields are marked *

↑
Suddi Belaku