
ಸುದ್ದಿ ಬೆಳಕು ವಾರ್ತೆ
ಯಾದಗಿರಿ: ಮಳೆ ಕೊರತೆಯಿಂದ ಯಾದಗಿರಿ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರಪೀಡಿತ ತಾಲೂಕುಗಳ ಮೊದಲ ಪಟ್ಟಿಯಲ್ಲಿ ಶಹಾಪುರ ತಾಲೂಕು ಮಾತ್ರ ಘೋಷಣೆಯಾಗಿದ್ದು, ಯಾದಗಿರಿ, ವಡಗೇರಾ, ಗುರುಮಿಠಕಲ್, ಸುರಪುರ ಹಾಗೂ ಹುಣಸಗಿ ತಾಲೂಕುಗಳಿಗೆ ಸ್ಥಾನ ನೀಡದಿರುವುದು ಖಂಡನೀಯ. ಇದೀಗ ಬಿಡುಗಡೆಯಾಗಿರುವ ಎರಡನೇ ಪಟ್ಟಿಯಲ್ಲೂ ಈ ತಾಲೂಕುಗಳನ್ನು ಕಡೆಗಣಿಸಿರುವುದು ಸರ್ಕಾರದ ರೈತಪರ ಕಾಳಜಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಬಿಜೆಪಿ ಯುವಮೋರ್ಚಾ ಯಾದಗಿರಿ ಜಿಲ್ಲಾಧ್ಯಕ್ಷ ಶ್ರೀಧರ ಸಾಹುಕಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾದಗಿರಿ ಜಿಲ್ಲೆಯ ರೈತರ ಕಣ್ಣೀರು ಸರ್ಕಾರಕ್ಕೆ ಕಾಣುತ್ತಿಲ್ಲವೇ, ಬರದ ಬವಣೆಯಲ್ಲಿ ರೈತರು ನರಳುತ್ತಿದ್ದರೂ ಸರ್ಕಾರದ ಬರಪೀಡಿತ ಪಟ್ಟಿಯಲ್ಲಿ ಶಹಾಪುರ ತಾಲೂಕು ಮಾತ್ರ ಕಾಣಿಸುತ್ತಿದೆ. ಹಾಗಾದರೆ ಯಾದಗಿರಿ ಜಿಲ್ಲೆಯ ಉಳಿದ ತಾಲೂಕುಗಳು ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲವೇ, ಇದು ಕರುಣೆ ಇಲ್ಲದ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ, ಎಂದು ಶ್ರೀಧರ ಸಾಹುಕಾರ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಮಳೆ ಕೊರತೆ ಹಾಗೂ ಬೆಳೆ ನಷ್ಟದ ವಾಸ್ತವಿಕ ಪರಿಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ಕೂಡಲೇ ಪರಿಶೀಲಿಸಿ, ಯಾದಗಿರಿ, ವಡಗೇರಾ, ಗುರುಮಿಠಕಲ್, ಸುರಪುರ ಹಾಗೂ ಹುಣಸಗಿ ತಾಲೂಕುಗಳನ್ನು ತಕ್ಷಣ ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕು. ರೈತರಿಗೆ ಸೂಕ್ತ ಬೆಳೆ ಪರಿಹಾರ, ಕೃಷಿ ಸಾಲ ಮರುಹೊಂದಾಣಿಕೆ, ಸಾಲ ವಸೂಲಾತಿಗೆ ತಾತ್ಕಾಲಿಕ ತಡೆ, ನರೇಗಾ ಅಡಿಯಲ್ಲಿ ನಿರಂತರ ಉದ್ಯೋಗ ಹಾಗೂ ಜಾನುವಾರುಗಳಿಗೆ ಮೇವು-ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅನ್ನದಾತನ ಬದುಕಿನೊಂದಿಗೆ ಕಾಂಗ್ರೆಸ್ ಸರ್ಕಾರ ಚೆಲ್ಲಾಟವಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸಿ ಯಾದಗಿರಿ ಜಿಲ್ಲೆಯ ಬರಪೀಡಿತ ತಾಲೂಕುಗಳಿಗೆ ನ್ಯಾಯ ಒದಗಿಸಬೇಕು. ರೈತರ ಸಂಕಷ್ಟವನ್ನು ಇನ್ನೂ ಕಡೆಗಣಿಸಿದರೆ ಯಾದಗಿರಿ ಜಿಲ್ಲೆಯ ರೈತರ ಪರವಾಗಿ ಬಿಜೆಪಿ ಯುವಮೋರ್ಚಾ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿಯಲಿದೆ, ಎಂದು ಶ್ರೀಧರ ಸಾಹುಕಾರ ಎಚ್ಚರಿಕೆ ನೀಡಿದ್ದಾರೆ.












Leave a Reply