
ಸುದ್ದಿ ಬೆಳಕು ವಾರ್ತೆ
ಯಾದಗಿರಿ: ಖಾಸಗಿ ಕಾರ್ಯಕ್ರಮದಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸುತ್ತಿದ್ದ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ್ ರಿಗೆ ಕರವೇ ಕಾರ್ಯಕರ್ತರು ಘೇರಾವ್ ಮಾಡಲೆತ್ನಿಸಿದಾಗ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ರವಿವಾರ ಬೆಳಗ್ಗೆ 11 ಗಂಟೆಗೆ ನಗರಕ್ಕೆ ಸೇಡಂ ನಿಂದ ಆಗಮಿಸುತ್ತಿದ್ದ ಸಚಿವರನ್ನು ಚಾಮನಳ್ಳಿ ಕ್ರಾಸ ಬಳಿ ಕರವೇ ತಾಲ್ಲೂಕು ಅಧ್ಯಕ್ಷ ಮಲ್ಲು ಮಾಳಿಕೇರಿ ನೇತೃತ್ವದಲ್ಲಿ ರಸ್ತೆಗೆ ಅಡ್ಡಲಾಗಿ ಸಚಿವರನ್ನು ಜಿಲ್ಲೆಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಯಾದಗಿರಿ ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಣೆ ಮಾಡದೇ ಕೇವಲ ಶಹಾಪೂರ ತಾಲ್ಲೂಕನ್ನು ಮಾತ್ರ ಪಟ್ಟಿಯಲ್ಲಿ ಸೇರಿಸಿದ್ದಕ್ಕೆ ಕರವೇ ತೀವ್ರ ಆಕ್ರೋಶ ವ್ಯಕ್ತಪಡಿಸಿ ಯಾವುದೇ ಜನಪ್ರತಿನಿಧಿಯನ್ನು ಜಿಲ್ಲೆಗೆ ಕಾಲಿಡಲು ಬಿಡುವುದಿಲ್ಲ ಎಂದು ಈಗಾಗಲೇ ಘೋಷಣೆ ಮಾಡಿತ್ತು.
ತನ್ನ ಘೋಷಣೆಯಂಗವಾಗಿ ಇಂದು ತೀವ್ರ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ಉಸ್ತುವಾರಿ ಸಚಿವರನ್ನು ಜಿಲ್ಲೆಗೆ ಕಾಲಿಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.
ಮೊದಲು ಬರ ಪಟ್ಟಿಗೆ ಆದ್ಯತೆ ಮೇರೆಗೆ ಯಾದಗಿರಿ- ಗುರುಮಠಕಲ್ ತಾಲ್ಲೂಕುಗಳನ್ನು ಸೇರ್ಪಡೆ ಮಾಡಿಯೇ ಜಿಲ್ಲೆಗೆ ಕಾಲಿಡಲಿ ಎಂದು ಕಾರ್ಯಕರ್ತರು ಆಕ್ರೋಶಭರಿತರಾಗಿ ನುಡಿದರು.
ಸಚಿವರ ಬರುವ ಪೂರ್ವದಲ್ಲಿಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಮಲ್ಲು ಮಾಳಿಕೇರಿ, ಕೂಡಲೇ ಜಿಲ್ಲೆಯನ್ನು 2ನೇ ಬರ ಪಟ್ಟಿಯಲಿ ಸೇರ್ಪಡೆ ಮಾಡಬೇಕು ಇಲ್ಲವಾದಲ್ಲಿ ಜಿಲ್ಲೆ ಬಂದ್ ಗೆ ಕರೆ ನೀಡುವುದು ಅನಿವಾರ್ಯವಾಗುತ್ತದೆ ಎಂದು ಗುಡುಗಿದರು. ನಂತರ ಕಾರ್ಯಕರ್ತರನ್ನು ಬಿಡುಗಡೆ ಮಾಡಲಾಯಿತು.
ಪ್ರತಿಭಟನೆಯಲ್ಲಿ ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ಚೌಡಯ್ಯ ಬಾವೂರ, ನಿಂಗಪ್ಪ ಗುಡಗುಡಿ, ಶರಣಬಸಪ್ಪ ಯಲ್ಹೇರಿ, ಅಂಬ್ರೇಷ್ ಕಟ್ಟಿಮನಿ, ಮಲ್ಲಿಕಾರ್ಜುನ ದೋರನಳ್ಳಿ, ಸಿದ್ದಪ್ಪ ಕೊಯಿಲೂರ, ಪ್ರಕಾಶ ಪಾಟೀಲ್ ಜೈಗ್ರಾಮ್, ಅಶೋಕ ನಾಯಕ, ಸಲಿಮ್ ಯರಗೋಳ, ಸುಭಾಷ ಯರಗೋಳ, ಬಸ್ಸು ಚಟ್ನಳ್ಳಿ, ಮೌನೇಶ ಮಾಧ್ವಾರ, ಸುರೇಶ ಬೆಳಗುಂದಿ, ರಾಜು ಪಗಲಾಪುರ, ರವಿ ನಾಯಕ, ಭೀಮಣ್ಣ ಚಟಿಗೇರಿ, ರಡ್ಡಿ ಕೌಳೂರು, ಸಿದ್ದು ಸಾಹುಕಾರ, ಮಹೇಶ ಠಾಣಗುಂದಿ, ಶರಣು ಮಡಿವಾಳ, ಮಲ್ಲಿಕಾರ್ಜುನ ಕನ್ನಡಿ, ಬಸ್ಸು ಜಗನ್ನಾಥ, ಬಸ್ಸು ನಾಯಕ, ವೆಂಕಟರಾಮುಲು, ಸಾಗರ ಸೈದಾಪೂರ, ಕಾಶಿನಾಥ ನಾನೇಕ, ಬಸವರಾಜ ಕಡ್ಡಿ, ರಮೇಶ ನಾಯಕ, ಹಣಮಂತ ಠಾಣಗುಂದಿ, ನಾಗರಾಜ ತಾಂಡೂರಕರ್, ಸೈದಪ್ಪ ಗೌಡಗೇರಾ, ರಾಜು ಗೌಡಗೇರಿ, ಭೀಮರಾಯ ಗೌಡಗೇರಾ, ಮೌನೇಶ ತಿಂಥಣಿ, ಶಣಗೌಡ ರಾಮಸಮುದ್ರ, ಜನಾರ್ಧನ ಚಾಮನಳ್ಳಿ, ಶಂಕರ ಜಿನಿಕೇರಿ ತಾಂಡಾ ಸೇರಿದಂತೆ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು.












Leave a Reply