ಯಾದಗಿರಿ ಜಿಲ್ಲಾ ಕ್ರೀಡಾಂಗಣಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಹೆಸರು ನಾಮಕರಣಕ್ಕೆ ಕರವೇ ಆಗ್ರಹ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ಇತಿಹಾಸ ಹಾಗೂ ಭಾರತ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸ್ಮರಣೆಯನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಯಾದಗಿರಿ ಜಿಲ್ಲಾ ಕ್ರೀಡಾಂಗಣಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹೆಸರು ನಾಮಕರಣ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಆಗ್ರಹಿಸಿದೆ.

ಈ ಕುರಿತು ಕರವೇ ಜಿಲ್ಲಾಧ್ಯಕ್ಷರಾದ ಟಿ.ಎನ್. ಭೀಮುನಾಯಕ ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ, ಯಾದಗಿರಿ ಜಿಲ್ಲಾ ಕ್ರೀಡಾಂಗಣಕ್ಕೆ “ಸರ್ದಾರ್ ವಲ್ಲಭಭಾಯಿ ಪಟೇಲ್ ಜಿಲ್ಲಾ ಕ್ರೀಡಾಂಗಣ” ಎಂದು ನಾಮಕರಣ ಮಾಡುವಂತೆ ಒತ್ತಾಯಿಸಿದರು.

1947ರ ಆಗಸ್ಟ್ 15ರಂದು ಭಾರತ ಸ್ವಾತಂತ್ರ್ಯ ಪಡೆದರೂ, ನಿಜಾಮರ ಆಡಳಿತದಲ್ಲಿದ್ದ ಹೈದರಾಬಾದ್ ಸಂಸ್ಥಾನವು ತಕ್ಷಣ ಭಾರತೀಯ ಒಕ್ಕೂಟಕ್ಕೆ ಸೇರ್ಪಡೆಯಾಗಿರಲಿಲ್ಲ. ಇಂದಿನ ಕಲ್ಯಾಣ ಕರ್ನಾಟಕದ ಯಾದಗಿರಿ, ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ ಸೇರಿದಂತೆ ಹಲವು ಪ್ರದೇಶಗಳು ಹೈದರಾಬಾದ್ ಸಂಸ್ಥಾನದ ಭಾಗವಾಗಿದ್ದವು. ನಿಜಾಮರ ಆಡಳಿತ ಮತ್ತು ರಜಾಕಾರರ ದೌರ್ಜನ್ಯದ ವಿರುದ್ಧ ಈ ಭಾಗದ ಜನರು ವಿಮೋಚನಾ ಹೋರಾಟ ನಡೆಸಿದರು. ಭಾರತದ ಅಂದಿನ ಗೃಹ ಸಚಿವರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನೇತೃತ್ವದಲ್ಲಿ 1948ರ ಸೆಪ್ಟೆಂಬರ್‌ನಲ್ಲಿ ಆಪರೇಷನ್ ಪೋಲೋ ಕಾರ್ಯಾಚರಣೆ ನಡೆಯಿತು. ಸೆಪ್ಟೆಂಬರ್ 17, 1948ರಂದು ನಿಜಾಮರ ಆಡಳಿತ ಅಂತ್ಯಗೊಂಡು ಹೈದರಾಬಾದ್ ಸಂಸ್ಥಾನ ಭಾರತೀಯ ಒಕ್ಕೂಟಕ್ಕೆ ಸೇರ್ಪಡೆಯಾಯಿತು. ಈ ದಿನವನ್ನು ಹೈದರಾಬಾದ್ ವಿಮೋಚನಾ ದಿನವಾಗಿ ಸ್ಮರಿಸಲಾಗುತ್ತದೆ.ಆದ್ದರಿಂದ, ಯುವಜನತೆಗೆ ಈ ಇತಿಹಾಸವನ್ನು ಪರಿಚಯಿಸುವ ಹಾಗೂ ವಿಮೋಚನಾ ಹೋರಾಟದ ಸ್ಮರಣೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಉದ್ದೇಶದಿಂದ ಯಾದಗಿರಿ ಜಿಲ್ಲಾ ಕ್ರೀಡಾಂಗಣಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹೆಸರು ನಾಮಕರಣ ಮಾಡುವುದು ಸೂಕ್ತವಾಗಿದೆ ಎಂದು ಟಿ.ಎನ್. ಭೀಮುನಾಯಕ ಅವರು ಹೇಳಿದರು.

ಕರವೇಯ ಈ ಮನವಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಶೀಘ್ರದಲ್ಲೇ ನಾಮಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ನಿಂಗಪ್ಪ ಗುಡುಗುಡಿ, ವಿಶ್ವರಾಜ ಪಾಟೀಲ್, ಸುರೇಶ್ ಬೆಳಗುಂದಿ, ಬಸವರಾಜ್ ಕಡ್ಡಿ, ಹಣಮಂತ ನಾನೇಕ್, ಕಾಶಿನಾಥ್ ನಾಯಕ್, ಅಶೋಕ್ ನಾಯಕ್, ಶರಣು ತಿಂತಿಣಿ, ವಿರುಪಾಕ್ಷ ಸ್ವಾಮಿ, ನಾಗರಾಜ್ ಪಿಲ್ಲಿ, ರಾಮಣ್ಣ ನಕಲ್ ಸೇರಿದಂತೆ ಇನ್ನು ಅನೇಕ ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *

↑
Suddi Belaku