ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟದ 4ನೇ ವಾರ್ಷಿಕ ಮಹಾಸಭೆ: ಸಹಕಾರ ಸಂಘಗಳ ಬಲವರ್ಧನೆಗೆ ಕರೆ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : “ರಾಜ್ಯದ ಸಹಕಾರ ಚಳವಳಿಯ ಬಲವರ್ಧನೆ ಹಾಗೂ ಸುಸ್ಥಿರ ಬೆಳವಣಿಗೆಗೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರಂತರವಾಗಿ ಶ್ರಮಿಸುತ್ತಿದೆ. ಪ್ರಾಥಮಿಕ ಸಹಕಾರ ಸಂಘಗಳಿಗೆ ಸೂಕ್ತ ಶಿಕ್ಷಣ, ನಾಯಕತ್ವ ತರಬೇತಿ ಮತ್ತು ಪ್ರಚಾರ ಕಾರ್ಯಕ್ರಮಗಳನ್ನು ಮಹಾಮಂಡಳ ವ್ಯವಸ್ಥಿತವಾಗಿ ಹಮ್ಮಿಕೊಳ್ಳುತ್ತಾ ಬಂದಿದೆ,” ಎಂದು ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರು ಹಾಗೂ ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥರೆಡ್ಡಿ ದರ್ಶನಾಪುರ ತಿಳಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತದ ೪ನೇ ವಾರ್ಷಿಕ ಮಹಾಸಭೆಯ (AGM) ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“ಜಿಲ್ಲೆಯ ಪ್ರತಿಯೊಂದು ಸಹಕಾರ ಸಂಘಗಳು ಸಹಕಾರಿ ಕಾಯ್ದೆಯನ್ವಯ ಸಕಾಲದಲ್ಲಿ ಸಹಕಾರಿ ಶಿಕ್ಷಣ ನಿಧಿಯನ್ನು ಒಕ್ಕೂಟಕ್ಕೆ ಪಾವತಿಸಿ ಸಹಕರಿಸಬೇಕು. ಸಹಕಾರ ಸಂಘಗಳು ಕೇವಲ ಸಾಲ ವಿತರಣೆಗೆ ಸೀಮಿತವಾಗದೆ, ಸಾರ್ವಜನಿಕರಿಗೆ ಹೆಚ್ಚಿನ ಸೇವೆ ಒದಗಿಸುವ ಜತೆಗೆ ಲಾಭದಾಯಕವಾಗಿ ಬೆಳೆಯುವತ್ತ ಮುನ್ನಡೆಯಬೇಕು,” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೆವೈಡಿಸಿಸಿ (KYDCC) ಬ್ಯಾಂಕ್ ನಿರ್ದೇಶಕ ಸುರೇಶ ಸಜ್ಜನ್, “ಯಾದಗಿರಿ ಜಿಲ್ಲಾ ಸಹಕಾರಿ ಒಕ್ಕೂಟವು ಸದಸ್ಯ ಸಂಘಗಳ ವಿಶ್ವಾಸಗಳಿಸಿ ಇಡೀ ರಾಜ್ಯಕ್ಕೆ ಮಾದರಿ ಸಂಸ್ಥೆಯಾಗಿ ಬೆಳೆಯಲಿ,” ಎಂದು ಶುಭ ಹಾರೈಸಿದರು. ಒಕ್ಕೂಟದ ನಿರ್ದೇಶಕ ಬಾಪುಗೌಡ ಪಾಟೀಲ್ ಹುಣಸಗಿ ಮಾತನಾಡಿ, “ಜಿಲ್ಲಾ ಯೂನಿಯನ್ ನಿರಂತರವಾಗಿ ಶಿಕ್ಷಣ ಮತ್ತು ತರಬೇತಿ ಶಿಬಿರಗಳನ್ನು ಸಂಘಟಿಸುವ ಮೂಲಕ ತಳಮಟ್ಟದ ಸಂಘಗಳ ಅಭಿವೃದ್ಧಿಗೆ ಪೂರಕವಾಗಿ ನಿಂತಿದೆ,” ಎಂದರು.

ಆಯವ್ಯಯ ಮಂಡನೆ ಹಾಗೂ ಲೆಕ್ಕಪರಿಶೋಧನೆ:

ಮಹಾಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಎಂ. ನಾರಾಯಣ ಅವರು ಅಡಾವೆ ಪತ್ರಿಕೆಯನ್ನು ಸಭೆಯ ಮುಂದಿಟ್ಟರು. ವೃತ್ತಿಪರ ನಿರ್ದೇಶಕ ವೈಜನಾಥ ಪಾಟೀಲ್ ತುಮಕೂರು ಅಂದಾಜು ಆಯವ್ಯಯ (ಬಜೆಟ್) ಮಂಡಿಸಿದರು. ದ್ವಿತೀಯ ದರ್ಜೆ ಸಹಾಯಕ ಸಿದ್ಧನಗೌಡ ಜಮಾ-ಖರ್ಚು ವಿವರಗಳನ್ನು ಸಭೆಯಲ್ಲಿ ವಾಚಿಸಿದರೆ, ಒಕ್ಕೂಟದ ವ್ಯವಸ್ಥಾಪಕ ವೀರಪ್ಪಣ್ಣ ಲಾಭ-ಹಾನಿಯ ವರದಿಯನ್ನು ಮಂಡಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸಕಾಲದಲ್ಲಿ ನಿಗದಿತ ಸಹಕಾರ ಶಿಕ್ಷಣ ನಿಧಿ ಪಾವತಿಸಿ ಮಾದರಿಯಾದ ಪ್ರಾಥಮಿಕ ಸಹಕಾರ ಸಂಘಗಳನ್ನು ‘ಅತ್ಯುತ್ತಮ ಸಹಕಾರ ಸಂಘ’ಗಳೆಂದು ಗುರುತಿಸಿ ವಿಶೇಷವಾಗಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಒಕ್ಕೂಟದ ನಿರ್ದೇಶಕರಾದ ಘೇವರಚಂದ್ ಜೈನ್, ಸಿದ್ದಪ್ಪ ಹೊಟ್ಟಿ, ಕೆಂಚಪ್ಪ ನಗನೂರ, ರಾಜಾ ಮುಕುಂದ ನಾಯಕ, ಶಾಂತಗೌಡ ಸಾದ್ಯಾಪುರ, ಶಾಂತಗೌಡ ಮುದನೂರ, ಆನಂದ ರೆಡ್ಡಿ, ಮುಖ್ಯ ಅತಿಥಿ ರಾಮನಗೌಡ ಕೊಟಗೇರಾ ಹಾಗೂ ಇಲಾಖಾ ಅಧಿಕಾರಿಗಳಾದ ಶರಣಬಸವ ಮಾಡೋಳ, ಕೆಒಎಫ್‌ನ ಸೀಮಾ ಮತ್ತಿತರರು ಉಪಸ್ಥಿತರಿದ್ದರು. ವೃತ್ತಿಪರ ನಿರ್ದೇಶಕ ಪ್ರಕಾಶ ಅಂಗಡಿ ಕನ್ನಳ್ಳಿ ನಿರೂಪಿಸಿದರು. ಒಕ್ಕೂಟದ ಸಿಇಒ ಸುಜಾತಾ ಮಠ ಸ್ವಾಗತಿಸಿ, ವಂದಿಸಿದರು. ಜಿಲ್ಲೆಯ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸಿಇಒಗಳು ಹಾಗೂ ಸಹಕಾರಿ ಬಂಧುಗಳು ಪಾಲ್ಗೊಂಡು ಸಭೆಯನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *

↑
Suddi Belaku