
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಸಿದ್ದಿ ಪುರುಷ ಶ್ರೀ ವಿಶ್ವಾರಾಧ್ಯರ ಜನ್ಮಕ್ಷೇತ್ರ ಗಂವ್ಹಾರದಿಂದ ಅಬ್ಬೆತುಮಕೂರಿನವರೆಗೂ ಆ.10ರಿಂದ (ಸೋಮವಾರ) ಆರಂಭವಾಗಲಿರುವ ಪರಂಪರಾ ಪಾದಯಾತ್ರೆಗಾಗಿ ಪೀಠಾಧಿಪತಿ ಡಾ.ಗಂಗಾಧರ ಸ್ವಾಮಿಗಳು ಅಪಾರ ಭಕ್ತರೊಂದಿಗೆ ಭಾನುವಾರ ಗಂವ್ಹಾರಕ್ಕೆ ಪಯಣ ಬೆಳೆಸಿದರು.
ಬೆಳಗ್ಗೆ ವಿಶ್ವಾರಾಧ್ಯರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ಶ್ರೀಗಳು ಜಗನ್ನಾಥೆ ಭಗಳಾಂಭದೇವಿ ದರ್ಶನ ಪಡೆದರು.
ನಂತರ ಮಠದ ಆವರಣದಲ್ಲಿ ಸೇರಿದ್ದ ಭಕ್ತರಿಗೆ ದರ್ಶನ ನೀಡಿ ಐತಿಹಾಸಿಕ ಪಾದಯಾತ್ರೆ ಬಗ್ಗೆ ವಿವರಿಸಿದರು.
ಸೋಮವಾರ ಬೆಳಗ್ಗೆ ಗಂವ್ಹಾರದ ಪೀಠಾಧೀಶ ಕಾಶೀಪೀಠದ 65ನೇ ಜಗದ್ಗುರು ಬನ್ನಿಬಸವೇಶ್ವರರ ಕರ್ತೃ ಗದ್ದುಗೆಗೆ ಮಹಾಪೂಜೆ ನೆರವೇರಿಸಿದ ನಂತರ ಮಧ್ಯಾಹ್ನ 1 ಗಂಟೆಗೆ ಸಕಲ ಮಂಗಲವಾದ್ಯಗಳೊಂದಿಗೆ ಅಮೃತೇಶ್ವರ ಮಂದಿರದಿಂದ ಪೂಜ್ಯರ ದರ್ಶನ, ಪ್ರಸಾದ ಪಡೆದುಕೊಂಡು ವಿಶ್ವಾರಾಧ್ಯರ ಜನ್ಮಭೂಮಿ ಪಂಚಗೃಹ ತೋಪಕಟ್ಟಿ ಹಿರೇಮಠದಿಂದ ಪಾದಯಾತ್ರೆ ಪ್ರಾರಂಭಗೊಳ್ಳಲಿದೆ ಎಂದು ಮಠದ ಕಾರ್ಯದರ್ಶಿ ಮಹೇಶ ಸ್ವಾಮಿ ತಿಳಿಸಿದ್ದಾರೆ. ಮುಂದೆ ಗ್ರಾಮದ ಸೀಮಾಂತರದಲ್ಲಿ ಊರಿನ ಚನ್ನಪ್ಪ ಸಾಹು ಬಿರಾದಾರ ಇವರ ಹೊಲದಲ್ಲಿ ನಿರ್ಮಿಸಿದ ಗುರುಮಂಟಪದಲ್ಲಿ ಶ್ರೀಗಳಿಗೆ ಪಾದಪೂಜೆ ನೆರವೇರುವುದು. ಅಲ್ಲಿ ಎಲ್ಲ ಭಕ್ತಗಣ ಪ್ರಸಾದ ಸ್ವೀಕರಿಸಿ ಮುಂದೆ ಹೊರಡುವ ಪಾದಯಾತ್ರೆ ಮಾರ್ಗಮಧ್ಯದಲ್ಲಿ ಅಲ್ಲಲ್ಲಿ ಅನೇಕ ಭಕ್ತರ ವಿಶ್ರಾಂತಿಕಟ್ಟೆಯಲ್ಲಿ ಪಾದಪೂಜೆಯನ್ನು ಮುಗಿಸಿಕೊಂಡು ಅಣಬಿ ಗ್ರಾಮವನ್ನು ತಲುಪುವುದು.
ಅಣಬಿ ಗ್ರಾಮದ ಭಕ್ತರು ಪಾದಯಾತ್ರೆಯನ್ನು ಭಕ್ತಿಯಿಂದ ಬರಮಾಡಿಕೊಂಡು ಶ್ರೀಗಳ ಪಾದಪೂಜೆ ನೆರವೇರಿಸುವುರು.
ಎಲ್ಲ ಪಾದಯಾತ್ರೆಗಳಿಗೆ ಶ್ರೀ ವಿಶ್ವಾರಾಧ್ಯರ ಶಾಖಾಮಠದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಾಗೆ ಮುಂದೆ ಸಾಗುವ ಪಾದಯಾತ್ರೆ ಸಿರವಾಳ ಗ್ರಾಮವನ್ನು ತಲುಪಿದ ಮೇಲೆ ಆ ಗ್ರಾಮದ ಮಾಜಿ ಶಾಸಕರಾದ ಗುರುಪಾಟೀಲ ನೇತೃತ್ವದಲ್ಲಿ ಸಾಯಿಬಣ್ಣ ಶರಣರ ಹೊಲದಲ್ಲಿ ಪ್ರಸಾದ ಜರುಗುವುದು.
ಅಲ್ಲಿಂದ ಹೊರಟ ಪಾದಯಾತ್ರೆ ಹುರಸಗುಂಡಗಿ ಮುಖಾಂತರ ಅಲ್ಲಿನ ಭಕ್ತರ ಸೇವೆಯನ್ನು ಸ್ವೀಕರಿಸಿ ಸನ್ನತಿ ಚಂದ್ರಲಾ ಪರಮೇಶ್ವರಿ ದೇವಸ್ಥಾನವನ್ನು ತಲುಪುವರು. ಅಲ್ಲಿ ಶ್ರೀಗಳು ದೇವಿಗೆ ವಿಶೇಷ ಪೂಜೆಯನ್ನು ನೆರವೇರಿಸಿದ ನಂತರ ಎಲ್ಲರೂ ಪ್ರಸಾದ ಸ್ವೀಕರಿಸಿ ವಾಸ್ತವ್ಯ ಮಾಡುವರು ಎಂದು ತಿಳಿಸಿದ್ದಾರೆ.











Leave a Reply