
ಸುದ್ದಿ ಬೆಳಕು ವಾರ್ತೆ
ವಡಗೇರಾ (ಯಾದಗಿರಿ): “ಮಗುವಿನ ಗರ್ಭಾವಸ್ಥೆಯಿಂದ ಹಿಡಿದು ೧೮ ವರ್ಷ ತುಂಬುವವರೆಗೂ ಬದುಕುವ, ರಕ್ಷಣೆ ಪಡೆಯುವ, ವಿಕಾಸ ಹೊಂದುವ ಹಾಗೂ ಸಾರ್ವಜನಿಕವಾಗಿ ಭಾಗವಹಿಸುವ ನಾಲ್ಕು ಮೂಲಭೂತ ಹಕ್ಕುಗಳನ್ನು ನಮ್ಮ ಸಂವಿಧಾನ ಒದಗಿಸಿದೆ,” ಎಂದು ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕ್ಷೇತ್ರ ಕಾರ್ಯಕರ್ತ ಪರ್ವತರೆಡ್ಡಿ ಎಸ್.ಐ. ತಿಳಿಸಿದರು.
ವಡಗೇರಾ ತಾಲ್ಲೂಕಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. “ಮಕ್ಕಳಿಗೆ ಕಡ್ಡಾಯವಾಗಿ ಜನನ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ್ ಮಾಡಿಸಬೇಕು. ಬಾಲ್ಯವಿವಾಹ ಸಮಾಜಕ್ಕೆ ಮಾರಕವಾಗಿದ್ದು, ಮದುವೆಯ ಮಾತುಕತೆ ಅಥವಾ ನಿಶ್ಚಿತಾರ್ಥದಂತಹ ಬೆಳವಣಿಗೆಗಳು ಕಂಡುಬಂದರೆ ಮಕ್ಕಳು ತಕ್ಷಣ ೧೦೯೮ ಅಥವಾ ೧೧೨ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು,” ಎಂದು ಕರೆ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕ ದೇವಪ್ಪ ಗಿರಿಗಿರಿ ಮಾತನಾಡಿ, ಪೋಕ್ಸೋ ಕಾಯ್ದೆ-೨೦೧೨ರ ಕುರಿತು ಮಾಹಿತಿ ನೀಡಿ, “ಮಕ್ಕಳು ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ (ಗುಡ್ ಟಚ್ ಮತ್ತು ಬ್ಯಾಡ್ ಟಚ್) ಬಗ್ಗೆ ಸದಾ ಜಾಗೃತರಾಗಿರಬೇಕು. ಶಾಲೆಯಲ್ಲಿ, ಮನೆಯಲ್ಲಿ ಅಥವಾ ಹೊರಗಡೆ ಯಾರಾದರೂ ಕೆಟ್ಟದಾಗಿ ವರ್ತಿಸಿದರೆ ತಕ್ಷಣ ಪಾಲಕರಿಗೆ ಅಥವಾ ಶಿಕ್ಷಕರಿಗೆ ತಿಳಿಸಬೇಕು,” ಎಂದರು.
ಶಹಾಪುರದ ಪ್ಯಾನೆಲ್ ವಕೀಲ ಶಿವಕುಮಾರ್ ಫಿರಂಗಿ ಮಾತನಾಡಿ, “ಜಿಲ್ಲಾ ಮತ್ತು ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಬಡ ಜನರಿಗೆ ಉಚಿತವಾಗಿ ನ್ಯಾಯಾಂಗ ನೆರವು ಹಾಗೂ ಸರ್ಕಾರಿ ವಕೀಲರ ಸೇವೆ ಸಿಗುತ್ತದೆ. ಅಪರಿಚಿತ ವ್ಯಕ್ತಿಗಳು ಹಿಂಬಾಲಿಸಿದರೆ ಅಥವಾ ಅನುಮಾನಾಸ್ಪದವಾಗಿ ವರ್ತಿಸಿದರೆ ತಕ್ಷಣ ೧೧೨ ಪೊಲೀಸ್ ಸಹಾಯವಾಣಿಗೆ ಕರೆ ಮಾಡಬೇಕು,” ಎಂದು ತಿಳಿಸಿದರು. ಮತ್ತೊಬ್ಬ ಪ್ಯಾನೆಲ್ ವಕೀಲ ಭೀಮಣ್ಣ ಎಂ. ಮಾತನಾಡಿ, ಮಕ್ಕಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಶಾಲೆಯಿಂದ ಹೊರಗುಳಿಯದೆ ಆಸಕ್ತಿಯಿಂದ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಪಡೆಯಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಶಾಂತಾ ಸಜ್ಜನ್ ಮಾತನಾಡಿ, “ಹೆಣ್ಣು ಮಕ್ಕಳು ಸದಾ ಸುರಕ್ಷಿತವಾಗಿರಬೇಕು. ಯಾರೊಂದಿಗೂ ಅತಿಯಾದ ಸಲುಗೆ ಬೆಳೆಸದೆ, ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಶಿಕ್ಷಕರ ಗಮನಕ್ಕೆ ತರಬೇಕು,” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲೆ ಶ್ರೀಮತಿ ಮಂಜುಳಾ, ವಾರ್ಡನ್ ಸಾಬೇಗೌಡ, ಸಹ ಶಿಕ್ಷಕರಾದ ನಾಗರಾಜ್, ಭಾಗ್ಯಶ್ರೀ ಹಾಗೂ ಶಾಲೆಯ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.












Leave a Reply