
ವಡಗೇರಾ: 2026-27ನೇ ಸಾಲಿನಿಂದ ರೈತರು ಯೂರಿಯಾ ಮತ್ತು ಡಿಎಪಿ ರಸಗೊಬ್ಬರಗಳನ್ನು ಖರೀದಿಸಲು ಎಫ್‍ಐಡಿ ನೊಂದಣಿ ಸಂಖ್ಯೆ ಕಡ್ಡಾಯವಾಗಿರುತ್ತದೆ ಎಂದು ವಡಗೇರಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಗಣಪತಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ತಾಲೂಕಿನ ಎಲ್ಲಾ ರೈತರು ತಮ್ಮ ಜಮೀನುಗಳಿಗೆ ಸಂಬಂಧಿಸಿದ ಸರ್ವೆ ನಂಬರುಗಳನ್ನು ಎಫ್‍ಐಡಿ ಸಂಖ್ಯೆಗೆ ಕಡ್ಡಾಯವಾಗಿ ಲಿಂಕ್ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಎಫ್‍ಐಡಿ ಸಂಖ್ಯೆಗೆ ಸರ್ವೆ ನಂಬರುಗಳನ್ನು ಲಿಂಕ್ ಮಾಡಿಸಿಕೊಂಡಿದ್ದಲ್ಲಿ ಮಾತ್ರ ರೈತರಿಗೆ ಮಾರಾಟ ಮಳಿಗೆಗಳಲ್ಲಿ ಯೂರಿಯಾ ಮತ್ತು ಡಿಎಪಿ ರಸಗೊಬ್ಬರಗಳನ್ನು ನೀಡಲಾಗುತ್ತದೆ. ಲಿಂಕ್ ಆಗದೆ ಇರುವ ಸರ್ವೆ ನಂಬರುಗಳಿಗೆ ಯಾವುದೇ ರೀತಿಯ ರಸಗೊಬ್ಬರ ವಿತರಣೆ ನಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ಮತ್ತು ನಿಜವಾದ ರೈತರಿಗೆ ಸೌಲಭ್ಯ ದೊರಕುವ ಉದ್ದೇಶದಿಂದ ಸರ್ಕಾರ ಈ ಕ್ರಮವನ್ನು ಜಾರಿಗೆ ತಂದಿದೆ ಎಂದು ತಿಳಿಸಲಾಗಿದೆ. ಈ ವ್ಯವಸ್ಥೆಯಿಂದ ರಸಗೊಬ್ಬರದ ದುರುಪಯೋಗವನ್ನು ತಡೆಯಲು ಹಾಗೂ ನಕಲಿ ಖರೀದಿಯನ್ನು ನಿಯಂತ್ರಿಸಲು ಸಹಾಯವಾಗುತ್ತದೆ ಎಂಬ ನಿರೀಕ್ಷೆ ಇದೆ.
ಆದ್ದರಿಂದ ತಾಲೂಕಿನ ಎಲ್ಲಾ ರೈತರು ತಕ್ಷಣವೇ ರೈತ ಸಂಪರ್ಕ ಕೇಂದ್ರ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಸರ್ವೆ ನಂಬರುಗಳನ್ನು ಎಫ್‍ಐಡಿ ಸಂಖ್ಯೆಗೆ ಲಿಂಕ್ ಮಾಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ. ಯಾವುದೇ ತೊಂದರೆ ಅಥವಾ ಮಾಹಿತಿ ಅಗತ್ಯವಿದ್ದಲ್ಲಿ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಲು ರೈತರಿಗೆ ಸೂಚಿಸಲಾಗಿದೆ.
ಕಾಲಮಿತಿಯೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ರಸಗೊಬ್ಬರ ಪಡೆಯಲು ಸಮಸ್ಯೆಯಾಗುವ ಸಾಧ್ಯತೆ ಇರುವುದರಿಂದ ರೈತರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆ ಎಚ್ಚರಿಕೆ ನೀಡಿದೆ.










Leave a Reply