ವಿಶೇಷ ಚೇತನರಿಗೆ ತ್ರಿಚಕ್ರ ಮೋಟಾರು ವಾಹನ ವಿತರಣೆ – ಸ್ವಾವಲಂಬಿ ಬದುಕಿಗೆ ಪ್ರೋತ್ಸಾಹ

Posted by

ಸುದ್ದಿ ಬೆಳಕು ವಾರ್ತೆ

ಶಹಾಪುರ: ವಿಶೇಷ ಚೇತನರ ಸ್ವಾವಲಂಬಿ ಬದುಕಿಗೆ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಕರೆ ನೀಡಿದರು.

ಶಹಾಪುರ ತಾಲೂಕ ಪಂಚಾಯಿತಿಯ 2025-26ನೇ ಸಾಲಿನ ವಿಶೇಷ ಚೇತನರ ಅನಿರ್ಬಂಧಿತ ಅಭಿವೃದ್ಧಿ ಅನುದಾನದಡಿ ವಿದ್ಯುತ್ ಚಾಲಿತ ತ್ರಿಚಕ್ರ ವಾಹನ ವಿತರಣಾ ಕಾರ್ಯಕ್ರಮವನ್ನು ಸಚಿವರ ಜನ ಸಂಪರ್ಕ ಕಚೇರಿ ಆವರಣದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಆಯ್ದ ಐದು ಫಲಾನುಭವಿಗಳಿಗೆ ತ್ರಿಚಕ್ರ ಮೋಟಾರು ವಾಹನಗಳ ಕೀಲಿಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು, ಈ ಸೌಲಭ್ಯವು ವಿಶೇಷ ಚೇತನರ ಜೀವನಮಟ್ಟ ಸುಧಾರಿಸುವುದರ ಜೊತೆಗೆ ಆತ್ಮವಿಶ್ವಾಸ ಹೆಚ್ಚಿಸಲು ಸಹಾಯಕವಾಗಲಿದೆ ಎಂದರು.

ವಿಶೇಷ ಚೇತನರ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳ ಸದುಪಯೋಗ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು. ತ್ರಿಚಕ್ರ ವಾಹನ ವಿತರಣೆಯ ಮೂಲಕ ಓಡಾಟದ ಸಮಸ್ಯೆ ನಿವಾರಿಸಿ ಉದ್ಯೋಗ ಹಾಗೂ ಶಿಕ್ಷಣದ ಅವಕಾಶಗಳನ್ನು ಹೆಚ್ಚಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಶಹಾಪುರ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ ಮಾಹಿತಿ ನೀಡಿ, ದೈಹಿಕ ಅಶಕ್ತತೆ ಹೊಂದಿರುವ, ಆದಾಯ ಮಿತಿಯೊಳಗಿನ ಹಾಗೂ ಚಾಲನಾ ಪರವಾನಗಿ ಹೊಂದಿರುವ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ವಿತರಿಸಿದ ವಾಹನಗಳು ವಿದ್ಯುತ್ ಬ್ಯಾಟರಿ ಚಾಲಿತವಾಗಿದ್ದು, ಸುರಕ್ಷತಾ ವ್ಯವಸ್ಥೆಗಳನ್ನು ಹೊಂದಿವೆ ಎಂದು ತಿಳಿಸಿದರು.

ತ್ರಿಚಕ್ರ ವಾಹನ ಪಡೆದ ಫಲಾನುಭವಿಯೊಬ್ಬರು ತಮ್ಮ ಸಂತಸವನ್ನು ವ್ಯಕ್ತಪಡಿಸಿ, ಇತ್ತೀಚಿನವರೆಗೂ ದಿನನಿತ್ಯದ ಅಗತ್ಯಗಳಿಗೆ ಇತರರ ಮೇಲೆ ಅವಲಂಬಿತರಾಗಿದ್ದೆ. ಇದೀಗ ಸ್ವತಂತ್ರವಾಗಿ ಓಡಾಡುವ ಅವಕಾಶ ದೊರೆತಿದ್ದು, ಜೀವನದಲ್ಲಿ ಹೊಸ ಭರವಸೆ ಮೂಡಿಸಿದೆ ಎಂದು ಹೇಳಿದರು.

ಈ ವೇಳೆ ಶಹಾಪುರ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಬಸವರಾಜ ಶರಭೈ, ಶಹಾಪುರ ತಾಲೂಕ ಪಂಚಾಯತ ತಾಲೂಕ ಯೋಜನಾಧಿಕಾರಿ ಶ್ರೀಮತಿ ಶಾರದಮ್ಮ ನಾಗ್ಲೋಟ್, ಸಚಿವರ ಆಪ್ತ ಕಾರ್ಯದರ್ಶಿ ಶಿವಶರಣು ಇಟಗಿ, ತಾಲೂಕ ಪಂಚಾಯತ ವಿವಿದ್ದೋಶ ಪುನರ್ವಸತಿ ಕಾರ್ಯಕರ್ತ ನಾಗರಾಜ, ತಾಲೂಕ ಅಂಗವಿಕಲರ ಹೋರಾಟ ಸಮಿತಿ ತಾಲೂಕ ಅಧ್ಯಕ್ಷ ಸಾಹೇಬ ಜಾನಿ, ತಾಲೂಕ ಕಾಂಗ್ರೆಸ್ ಪಕ್ಷದ ಮುಖಂಡರು, ಅಣಬಿ, ರಸ್ತಾಪೂರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಶರಣಪ್ಪ, ಮಲ್ಲಿಕಾರ್ಜುನ, ನಗರ ಪುನರ್ವಸತಿ ಕಾರ್ಯಕರ್ತ ಬಸವರಾಜ ಮತ್ತು ಪ್ರವೀಣ, ವಿಶೇಷ ಚೇತನರು, ಪೋಷಕರು ಹಾಗೂ ಸಾರ್ವಜನಿಕರು ಇದ್ದರು.

Leave a Reply

Your email address will not be published. Required fields are marked *

Suddi Belaku