ಪರವಾನಿಗೆ ಇಲ್ಲದೆ ವ್ಯಾಪಾರ ಮಾಡಿದರೆ ಕ್ರಮ: ಯಾದಗಿರಿಯಲ್ಲಿ ಡಿಸಿ ಎಚ್ಚರಿಕೆ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ನಗರದ ಎಲ್ಲ ಅಂಗಡಿ,ಮುಗ್ಗಟ್ಟುಗಳ ಮಾಲಿಕರು, ವ್ಯಾಪಾರಸ್ಥರು ನಗರಸಭೆಯಿಂದ ಕಡ್ಡಾಯವಾಗಿ ಪರವಾನಿಗೆ ಪಡೆದೇ ವ್ಯವಹಾರ ಮಾಡಬೇಕು ಮತ್ತು ಸಕಾಲಕ್ಕೆ ತೆರಿಗೆ ಕಟ್ಟಬೇಕು. ಈ ನಿಯಮ ಮೀರುವವರ ಪರವಾನಿಗೆ ರದ್ದು ಪಡಿಸಲಾಗುವುದೆಂದು ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಎಚ್ಚರಿಕೆ ನೀಡಿದ್ದಾರೆ.
ನಗರದ ಸುಭಾಸ್ ಸರ್ಕಲ್ ಸೇರಿದಂತೆಯೇ ವಿವಿಧ ಸ್ಥಳಗಳಿಗೆ ಗುರುವಾರ ಬೆಳಗ್ಗೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಚಿತ್ತಾಪುರ ರಸ್ತೆ, ಹಳೆ ಬಸ್ ನಿಲ್ದಾಣ ಏರಿಯಾ, ಶಾಸ್ತ್ರಿ ಚೌಕ್, ಹೊಸ ಬಸ್ ನಿಲ್ದಾಣ ಹೀಗೆ ಎಲ್ಲಡೇ ಪಾದಯಾತ್ರೆ ಮೂಲಕ ಸಂಚರಿಸಿದ ಅವರು, ಇಂಚಿಂಚೂ ಸ್ಥಳ ಬೀಡದೇ ಪರಿಶೀಲಿಸಿದರು.
ಎಲ್ಲೆಂದರಲ್ಲಿ ಬಿದ್ದ ಕಸದ ರಾಶಿ ಕಂಡು ಗರಂ ಆದ ಡಿಸಿ ಅವರು, ಅಲ್ಲಿದ್ದ ವ್ಯಾಪಾರಿಗಳಿಗೆ ಕರೆದು ನಾಳೆಯಿಂದ ಈ ಕಸ ಇರಬಾರದು, ನಿತ್ಯವೂ ಒಂದು ಕಡೆ ಜಮಾ ಮಾಡಿ‌ ನಗರಸಭೆ ವಾಹನದಲ್ಲಿಯೇ ಡಂಪ್ ಮಾಡಬೇಕು. ತಪ್ಪಿದಲ್ಲಿ ದಂಡ ಹಾಕಲಾಗುವುದೆಂದು ಕಡಕ್ ಆಗಿಯೇ ಹೇಳಿದರು.
ಎಳೆ ನೀರು ವ್ಯಾಪಾರಿಗಳ ಹತ್ತಿರ ತೆರಳಿದ ಅವರು, ಅವರು ಹೊಂದಿರುವ ಪರವಾನಿಗೆ ಪರಿಶೀಲಿಸಿದರು.


ಹತ್ತಾರು ಅಂಗಡಿಗಳ ಮಾಲಿಕರ ಹತ್ತಿರ ತೆರಳಿ ಅವರ ಅವಹಾಲುಗಳನ್ನು ಕೇಳಿದ ಡಿಸಿ ಅವರು, ಅಗತ್ಯ ಸೌಲಭ್ಯಗಳನ್ನು ನಗರಸಭೆಯಿಂದ ನೀಡಲಾಗುವುದೆಂದರು.
ಶಾಸ್ತ್ರಿ ಸರ್ಕಲ್ ಬಳಿ ಇರುವ ಮೂತ್ರಾಲಯದ ಪಕ್ಕದ ರಸ್ತೆಯಲ್ಲಿ ಚರಂಡಿ,ಮಳೆ ನೀರು ಮೂತ್ರ ಜಮಾಗೊಂಡು ಜನರಿಗೆ ಆಗುತ್ತಿರುವ ತೊಂದರೆಗಳನ್ನು ಸಾರ್ವಜನಿಕರಿಂದ ತಿಳಿದು, ಅದನ್ನು ಸರಿಗೊಳಿಸಬೇಕೆಂದು ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ ಅವರಿಗೆ ಸೂಚಿಸಿದರು.
ಚರಂಡಿಗಳ ಸ್ಚಚ್ಛತೆ ದಿನಾಲು ಆಗಬೇಕು, ಪುಟ್ ಪಾತ್ ಗಳ ಮೇಲೆ ಬಿದ್ದಿರುವ ಕಸ ತೆಗೆದು ಪಾದಾಚಾರಿಗೆ ಸರಳ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದರು.
ಮುದ್ನಾಳ್ ಪಂಪ್ ಹತ್ತಿರದ ದೊಡ್ಡ ತೆಗ್ಗು ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ಮುಕ್ತ ಅವಕಾಶ ನೀಡಬೇಕೆಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭೆ ಪೌರಾಯಕ್ತ ಉಮೇಶ ಚವ್ಹಾಣ, ಸಿಬ್ಬಂದಿ ಶರಣಮ್ಮ ಸೇರಿದಂತೆಯೇ ಇತರರಿದ್ದರು.

Leave a Reply

Your email address will not be published. Required fields are marked *

Suddi Belaku