ಆದರ್ಶ ಮೌಲ್ಯಗಳ ಪರಿಪಾಲನೆಯಿಂದ ಜೀವನದಲ್ಲಿ ಶ್ರೇಯಸ್ಸು: ರಂಭಾಪುರಿ ಜಗದ್ಗುರುಗಳು

Posted by

ಸುದ್ದಿ ಬೆಳಕು ವಾರ್ತೆ

ಚನ್ನಗಿರಿ : ಬಾಳಿನ ಭಾಗ್ಯೋದಯಕ್ಕೆ ಆದರ್ಶ ಮೌಲ್ಯಗಳ ಪರಿಪಾಲನೆ ಬೇಕು. ಪರಿಶ್ರಮ ಮತ್ತು ಸಾಧನೆಯಿಲ್ಲದೇ ಜೀವನದಲ್ಲಿ ಉನ್ನತಿ ಕಾಣಲು ಸಾಧ್ಯವಿಲ್ಲ. ಸದ್ಗುಣ ಸಂಸ್ಕಾರ ಮತ್ತು ಸಚ್ಚಾರಿತ್ರö್ಯದಿಂದ ಬದುಕು ಶ್ರೀಮಂತಗೊಳ್ಳಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಬುಧವಾರ ತಾಲೂಕಿನ ತಾವರೆಕೆರೆ ಶಿಲಾಮಠದಲ್ಲಿ ಲಿಂ.ಸಿದ್ಧಲಿAಗ ಶಿವಾಚಾರ್ಯರ ೫೫ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಏನೆಲ್ಲ ಸಂಕಷ್ಟಗಳು ಬಂದರೂ ಏಕಾಗ್ರತೆ ಮತ್ತು ಆಧ್ಯಾತ್ಮ ಸಾಧನೆಯಿಂದ ಬಾಳಿ ಜೀವನದಲ್ಲಿ ಶ್ರೇಯಸ್ಸನ್ನು ಕಾಣಬೇಕಾಗಿದೆ. ಜಗದ ಕತ್ತಲೆ ಕಳೆಯಲು ಸೂರ್ಯನೇ ಬೇಕು. ಜನರ ಭಾವನೆ ಬೆಳಗಲು ಗುರುವೇ ಬೇಕು. ಮಲತ್ರಯಗಳನ್ನು ನಿರ್ಮೂಲನ ಮಾಡಿ ಶಿವಜ್ಞಾನದ ಬೆಳಕನ್ನು ಬೀರುವಾತನೇ ನಿಜವಾದ ಗುರು. ಕರ್ಮ ಕತ್ತಲೆ ಕಳೆದು ಧರ್ಮ ಬೀಜ ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಗುರುವನ್ನು ಎಷ್ಟು ಸ್ಮರಿಸಿದರೂ ಕಡಿಮೆಯೇ ಆಗಿದೆ. ದೇವರು ಧರ್ಮ ಮತ್ತು ಶ್ರೀ ಗುರುವಿನಲ್ಲಿ ನಂಬಿಗೆ ವಿಶ್ವಾಸಗಳನ್ನಿಟ್ಟುಕೊಂಡು ಬಾಳಿದರೆ ಜೀವನ ಸಾರ್ಥಕಗೊಳ್ಳುತ್ತದೆ. ಲಿಂ. ಸಿದ್ಧಲಿಂಗ ಶಿವಾಚಾರ್ಯರು ವಾಕ್ ಸಿದ್ಧಿ ಪಡೆದ ಮತ್ತು ಯಂತ್ರ ಮಂತ್ರಗಳಲ್ಲಿ ಅಪಾರ ಶ್ರದ್ಧೆಯಿಟ್ಟುಕೊಂಡ ಶ್ರೀಗಳವರು ಯಾವಾಗಲೂ ಧರ್ಮ ಮತ್ತು ಸಮಾಜ ಮುಖಿಯಾಗಿ ಕಾರ್ಯ ಮಾಡಿದ್ದನ್ನು ಎಂದಿಗೂ ಮರೆಯಲಾಗದು. ಅವರ ೫೫ನೇ ಪುಣ್ಯ ಸ್ಮರಣೋತ್ಸವ ಸಮಾರಂಭ ಸಂಯೋಜಿಸಿರುವುದು ಭಕ್ತ ಸಂಕುಲದ ಸೌಭಾಗ್ಯವೆಂದರೆ ತಪ್ಪಾಗದು ಎಂದರು.
ಸಮಾರಂಭ ಉದ್ಘಾಟಿಸಿದ ಯುವ ಧುರೀಣ ಮಾಡಾಳು ಮಲ್ಲಿಕಾರ್ಜುನ ಮಾತನಾಡಿ ಮನುಷ್ಯ ಎಷ್ಟು ವರುಷ ಬಾಳಿದನೆಂಬುದು ಮುಖ್ಯವಲ್ಲ. ಬದುಕಿರುವಷ್ಟು ದಿನ ಯಾವ ರೀತಿ ಬಾಳಿದನೆಂಬುದು ಮುಖ್ಯ. ಮಲಿನಗೊಂಡ ಮನಸ್ಸನ್ನು ಶುದ್ಧಗೊಳಿಸಲು ಗುರುವೊಬ್ಬನೇ ಸಮರ್ಥ. ಅರಿವಿನ ದಾರಿಯಲ್ಲಿ ನಡೆಯಲು ಶ್ರೀ ಗುರುವಿನ ಮಾರ್ಗದರ್ಶನದ ಅವಶ್ಯಕತೆ ಇದೆ. ಲಿಂ. ಸಿದ್ಧಲಿಂಗ ಶ್ರೀಗಳು ದೈವಾಂಶ ಸಂಭೂತರಾಗಿ ಬಾಳಿಗೆ ಬೆಳಕು ತೋರಿದ ಸದ್ಗುರುವೆಂಬುದನ್ನು ನೆನಪಿಸಿಕೊಳ್ಳಬೇಕಾಗಿದೆ ಎಂದರು.
ನೇತೃತ್ವ ವಹಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು ಮಾತನಾಡಿ ಭವ ಬಂಧನದಿAದ ಭಕ್ತನನ್ನು ಮುಕ್ತಗೊಳಿಸುವಂಥ ಶಕ್ತಿ ಗುರುವಿಗೆ ಇದೆ. ದೇವರು ಧರ್ಮ ಮತ್ತು ಗುರುವನ್ನು ಯಾವತ್ತೂ ಮರೆಯಬಾರದು. ಲಿಂ.ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಭಕ್ತರ ಕಷ್ಟಗಳನ್ನು ಪರಿಹರಿಸಿ ಸನ್ಮಾರ್ಗದತ್ತ ಕರೆತಂದವರಾಗಿದ್ದರು. ಅವರ ಆದರ್ಶ ದಾರಿ ನಮ್ಮೆಲ್ಲರ ಬಾಳ ಬದುಕಿನಲ್ಲಿ ಶ್ರೇಯಸ್ಸನ್ನು ಉಂಟು ಮಾಡುತ್ತದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ತಾವರೆಕೆರೆ ಶಿಲಾಮಠದ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಗುರು ಶಕ್ತಿ ಬಹಳ ದೊಡ್ಡದು. ಸಮರ್ಥ ಗುರುವೊಬ್ಬ ಇದ್ದು ಬಾಳಿದರೆ ಜಗದಲ್ಲಿ ಆದರ್ಶ ವ್ಯಕ್ತಿಯಾಗಿ ಸಮಾಜದ ಸಂಪನ್ಮೂಲ ವ್ಯಕ್ತಿಯಾಗಿ ಬಾಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಲಿಂ. ಶ್ರೀ ಸಿದ್ಧಲಿಂಗ ಶಿವಾಚಾರ್ಯರ ಪೂಜಾ-ತಪ-ಅನುಷ್ಠಾನ ತತ್ವ ಸಿದ್ಧಾಂತಗಳ ಅರಿವು ಹೊಂದಿ ಭಕ್ತನನ್ನು ಸನ್ಮಾರ್ಗದಲ್ಲಿ ಒಯ್ಯುವ ಗುರಿ ಅವರದಾಗಿತ್ತು ಎಂದರು. ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯರು, ಚನ್ನಗಿರಿ ಕೇದಾರ ಡಾ.ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯರು, ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯರು, ಬೇರುಗಂಡಿ ಮಠದ ರೇಣುಕ ಮಹಾಂತ ಶಿವಾಚಾರ್ಯರು, ಕೆ.ಬಿದರೆ ಪ್ರಭುಕುಮಾರ ಶಿವಾಚಾರ್ಯರು, ಹಣ್ಣೆ ಹಿರೇಮಠದ ಮರುಳಸಿದ್ಧ ಪಂಡಿತಾರಾಧ್ಯ ಶ್ರೀಗಳವರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ತೆಂಡೇಕೆರೆ ಗಂಗಾಧರ ಶಿವಾಚಾರ್ಯರು ಸ್ವಾಗತಿಸಿದರು. ಸಂಗಯ್ಯ ಶಾಸ್ತಿçಗಳು ಪ್ರಾರ್ಥನೆ ಸಲ್ಲಿಸಿದರು. ಬೀರೂರು ರುದ್ರಮುನಿ ಶಿವಾಚಾರ್ಯರು ನಿರೂಪಣೆ ಮಾಡಿದರು. ಸಮಾರಂಭದ ನಂತರ ಅನ್ನದಾಸೋಹ ಜರುಗಿತು.
ಬೆಳಿಗ್ಗೆ ಲೋಕಹಿತ ಜನಕಲ್ಯಾಣಕ್ಕಾಗಿ ಶ್ರೀ ಮಠದ ಆವರಣದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಪೂಜಾ ನೆರವೇರಿಸಿ ಭಕ್ತ ಸಮೂಹಕ್ಕೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *

Suddi Belaku