
ಸುದ್ದಿ ಬೆಳಕು ವಾರ್ತೆ
ಹರಿಹರ, ಏಪ್ರಿಲ್ 19: ಭಗವಂತನು ಪ್ರತಿಯೊಬ್ಬರ ಮನದಲ್ಲೇ ನೆಲೆಸಿರುವನು. ಅವನನ್ನು ಹೊರಗೆ ಹುಡುಕುವುದಕ್ಕಿಂತ ಭಕ್ತಿ ಮೂಲಕ ಮನದಲ್ಲೇ ಅರಿತುಕೊಳ್ಳಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ತಾಲೂಕಿನ ದೊಗ್ಗಳ್ಳಿ ಗ್ರಾಮದಲ್ಲಿ ಶ್ರೀ ಕರಿಯಮ್ಮದೇವಿ ದೇವಸ್ಥಾನದ ಕಳಸಾರೋಹಣ ಹಾಗೂ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಜೀವನವೆಂಬ ಜೋಳಿಗೆಯಲ್ಲಿ ಭಗವಂತ ಎಲ್ಲರಿಗೂ ಸಂತೋಷವನ್ನು ನೀಡಿದ್ದಾನೆ. ಆತನ ಅರಿವು ಪಡೆಯಲು ಭಕ್ತಿಯೇ ಸುಲಭ ಮಾರ್ಗ ಎಂದು ತಿಳಿಸಿದರು.
“ಮನುಷ್ಯನ ಬುದ್ಧಿಗೆ ಮೀರಿದ ಅದ್ಭುತ ಶಕ್ತಿಯೇ ದೇವರು. ಆತ ಕಣ್ಣಿಗೆ ಕಾಣದಿದ್ದರೂ ತನ್ನ ಸೃಷ್ಟಿಯಲ್ಲಿ ಎಲ್ಲೆಡೆ ಗೋಚರಿಸುತ್ತಾನೆ. ಕಷ್ಟಪಟ್ಟು ದುಡಿದು ಗಳಿಸಿದ ಜೀವನ, ದೈವ ಭಕ್ತಿ ಮತ್ತು ನಂಬಿಕೆ ಎಂದಿಗೂ ಕೈ ಬಿಡುವುದಿಲ್ಲ” ಎಂದು ಹೇಳಿದರು.
ಅವರು ಮುಂದುವರೆದು, “ಕಷ್ಟಗಳು ಪಾಠ ಕಲಿಸುತ್ತವೆ, ನಂಬಿಕೆಗಳು ಶಕ್ತಿ ತುಂಬುತ್ತವೆ. ಪ್ರಯತ್ನ ಹಣೆಬರಹಕ್ಕಿಂತ ದೊಡ್ಡದು. ವೀರಶೈವ ಧರ್ಮದಲ್ಲಿ ಶಿವನಷ್ಟೇ ಶಕ್ತಿಯೂ ಮಹತ್ವದ್ದು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಧರ್ಮವೇ ಜೀವನದ ಮೂಲ. ದಯೆ ಮತ್ತು ಮಾನವೀಯತೆ ಎಲ್ಲ ಧರ್ಮಗಳ ಸಾರ ಎಂದು ಹೇಳಿದರು.
ಕಡೇನಂದಿಹಳ್ಳಿ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಉಪದೇಶ ನೀಡಿ, ಮನುಷ್ಯನ ಮೌಲ್ಯವನ್ನು ಕಳೆದುಕೊಂಡ ನಂತರ ಅರಿಯುತ್ತೇವೆ. ಬದುಕಿನಲ್ಲಿ ಅಹಂಕಾರ ಬೇಡ, ಎಲ್ಲವೂ ಕ್ಷಣಿಕ ಎಂಬ ಅರಿವು ಇರಬೇಕು ಎಂದರು.
ಹಾರನಹಳ್ಳಿ ರಾಮಲಿಂಗೇಶ್ವರ ಮಠದ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಗುರು-ಶಿಷ್ಯ ಸಂಬಂಧ ಹಾಗೂ ಜೀವಾತ್ಮ-ಪರಮಾತ್ಮ ಸಂಬಂಧದ ಮಹತ್ವ ವಿವರಿಸಿದರು. ರಾಮಘಟ್ಟ ಪುರವರ್ಗ ಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದಲ್ಲಿ ಸಂಭ್ರಮದಿಂದ ನಡೆಯಿತು. ನಂತರ ದೇವಸ್ಥಾನದ ಗೋಪುರಕ್ಕೆ ಕಳಸಾರೋಹಣ ನೆರವೇರಿಸಿ ಭಕ್ತರಿಗೆ ಆಶೀರ್ವಾದ ನೀಡಲಾಯಿತು. ಕಾರ್ಯಕ್ರಮದ ಬಳಿಕ ಅನ್ನದಾಸೋಹ ಜರುಗಿತು.










Leave a Reply