ರಾಯಚೂರು : “ಎಚ್ಐವಿ ಸೋಂಕು ಹರಡದಿರಲಿ–ಬಾಳು ಬಂಗಾರವಾಗಲಿ” ಎಂಬ ಘೋಷವಾಕ್ಯದಡಿ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಹಾಗೂ ರೆಡ್ ರಿಬ್ಬನ್ ಕ್ಲಬ್ (ಆರ್ಆರ್ಸಿ) ಘಟಕಗಳ ವತಿಯಿಂದ ಸೋಮವಾರ ವಿವಿಧೆಡೆ ಫ್ಲ್ಯಾಶ್ಮಾಬ್ ಹಾಗೂ ಬೀದಿ ನಾಟಕ ಪ್ರದರ್ಶಿಸಿ ಸಾರ್ವಜನಿಕರಲ್ಲಿ ಎಚ್ಐವಿ–ಏಡ್ಸ್ ಕುರಿತು ಜಾಗೃತಿ ಮೂಡಿಸಲಾಯಿತು.
ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ. ಸಂತೋಷಕುಮಾರ ರೇವೂರ ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
‘ಎನ್ಎಸ್ಎಸ್ ಹಾಗೂ ರೆಡ್ ರಿಬ್ಬನ್ ಕ್ಲಬ್ ಘಟಕಗಳು ಪ್ರತಿ ಶೈಕ್ಷಣಿಕ ವರ್ಷದಲ್ಲಿ ಎಚ್ಐವಿ–ಏಡ್ಸ್, ಕ್ಷಯರೋಗ ಹಾಗೂ ಸ್ವಯಂಪ್ರೇರಿತ ರಕ್ತದಾನದ ಕುರಿತು ನಿರಂತರವಾಗಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಫ್ಲ್ಯಾಶ್ಮಾಬ್ ಮತ್ತು ಬೀದಿ ನಾಟಕದಂತಹ ಪರಿಣಾಮಕಾರಿ ಮಾಧ್ಯಮಗಳ ಮೂಲಕ, ವಿಶೇಷವಾಗಿ ಯುವ ಸಮುದಾಯದಲ್ಲಿ ಅರಿವು ಮೂಡಿಸುವ ಅಗತ್ಯವಿದೆ’ ಎಂದು ಅವರು ಹೇಳಿದರು.
ನಗರದ ಕೇಂದ್ರ ಬಸ್ ನಿಲ್ದಾಣ, ಕಾಟಿ ದರ್ವಾಜಾ, ತೀನ್ಕಂದೀಲು ವೃತ್ತ, ಉಸ್ಮಾನಿಯಾ ತರಕಾರಿ ಮಾರುಕಟ್ಟೆ, ಮಹಾವೀರ ವೃತ್ತ, ಭವಾನಿ ವೃತ್ತ ಹಾಗೂ ಭಂಗಿ ಕುಂಟಾ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ವಿದ್ಯಾರ್ಥಿನಿಯರು ಫ್ಲ್ಯಾಶ್ಮಾಬ್ ಮತ್ತು ಬೀದಿ ನಾಟಕ ಪ್ರದರ್ಶಿಸಿದರು.
ಎಚ್ಐವಿ ಸೋಂಕಿನ ಕಾರಣಗಳು, ಹರಡುವ ವಿಧಾನ, ನಿಯಂತ್ರಣ ಹಾಗೂ ತಡೆಗಟ್ಟುವ ಕ್ರಮಗಳು, ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳು, ಸೋಂಕಿತರಿಗಾಗಿ ಸರ್ಕಾರದ ಸೌಲಭ್ಯಗಳು ಮತ್ತು ಎಚ್ಐವಿ–ಏಡ್ಸ್ (ತಡೆ ಮತ್ತು ನಿಯಂತ್ರಣ) ಕಾಯ್ದೆ–2017ರಲ್ಲಿನ ರಕ್ಷಣಾತ್ಮಕ ಅಂಶಗಳ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಯಿತು.
ಸ್ವಯಂಸೇವಕಿಯರಾದ ಭವಾನಿ, ಲಕ್ಷ್ಮೀ, ಸ್ವಪ್ನಾ ಹಾಗೂ ರೇಣುಕಾ ಡೊಳ್ಳು ವಾದ್ಯದಲ್ಲಿ ಭಾಗವಹಿಸಿದರು. ಸುಷ್ಮಾ, ಅನ್ನಪೂರ್ಣ, ಸಂಗೀತಾ ವೆಂಕಟೇಶ, ಜಮುನಾ, ಜಮುಲಮ್ಮ, ಮಹೇಶ್ವರಿ ಬಿ., ರೇಖಾ, ಜಯಶ್ರೀ, ತೇಜೇಶ್ವರಿ, ಅಂಬಿಕಾ, ರೂಪಾ, ತುಳಸಿ, ಅಂಬುಜಾ, ಸಂಗೀತಾ ವಿರೂಪಾಕ್ಷಿ ಸೇರಿದಂತೆ ವಿದ್ಯಾರ್ಥಿನಿಯರು ಪಾತ್ರಾಭಿನಯ ಹಾಗೂ ಹಾಡುಗಾರಿಕೆಯ ಮೂಲಕ ಜಾಗೃತಿ ಮೂಡಿಸಿದರು.
ಡಾ. ಸಂತೋಷಕುಮಾರ ರೇವೂರ ಕಾರ್ಯಕ್ರಮದುದ್ದಕ್ಕೂ ಉಪಸ್ಥಿತರಿದ್ದು ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡಿದರು.
Leave a Reply