ರಾಜಧನ ಪದ್ಧತಿ ಸರಳೀಕರಣಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಮೂರನೇ ದಿನವೂ ಬಂದ್ | ಲಕ್ಷಾಂತರ ಕಾರ್ಮಿಕರಿಗೆ ಕೆಲಸವಿಲ್ಲ, ನಿರ್ಮಾಣ ಕಾಮಗಾರಿಗಳಿಗೂ ಹೊಡೆತ
ಸುದ್ದಿ ಬೆಳಕು ವಾರ್ತೆ
ಯಾದಗಿರಿ: ಬೆಳಗ್ಗೆ ಕೆಲಸಕ್ಕೆ ಹೋಗಿ ಸಂಜೆ ಕೂಲಿ ಪಡೆದು ಮನೆಗೆ ಅಡುಗೆ ಮಾಡುತ್ತಿದ್ದ ಸಾವಿರಾರು ಕುಟುಂಬಗಳ ಬದುಕಿಗೆ ಕಲ್ಲು ಕ್ವಾರಿ ಮತ್ತು ಕ್ರಷರ್ ಘಟಕಗಳ ಬಂದ್ ದೊಡ್ಡ ಹೊಡೆತ ನೀಡಿದೆ. ಏಕಮುಖ ರಾಜಧನ ಪದ್ಧತಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟ ಕರೆ ನೀಡಿರುವ ರಾಜ್ಯವ್ಯಾಪಿ ಬಂದ್ ಮೂರನೇ ದಿನವೂ ಮುಂದುವರಿದಿದ್ದು, ಇದರ ನೇರ ಪರಿಣಾಮ ಕಾರ್ಮಿಕರ ಬದುಕಿನ ಮೇಲೆ ಬೀಳುತ್ತಿದೆ.


ಯಾದಗಿರಿ ಸೇರಿದಂತೆ ರಾಜ್ಯಾದ್ಯಂತ 8,300ಕ್ಕೂ ಅಧಿಕ ಕಲ್ಲು ಕ್ವಾರಿ ಹಾಗೂ ಕ್ರಷರ್ ಘಟಕಗಳು ಸ್ಥಗಿತಗೊಂಡಿವೆ. ಕಲ್ಲು ಕ್ವಾರಿ, ಕ್ರಷರ್ ಮತ್ತು ಎಂ-ಸ್ಯಾಂಡ್ ಘಟಕಗಳಲ್ಲಿ ದುಡಿಯುವ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ದಿನಗೂಲಿಯನ್ನೇ ನಂಬಿಕೊಂಡಿರುವ ಕುಟುಂಬಗಳು ಇದೀಗ ಜೀವನ ನಿರ್ವಹಣೆಗೆ ಪರದಾಡುವ ಪರಿಸ್ಥಿತಿ ಎದುರಿಸುತ್ತಿವೆ.
ಕೇವಲ ಕ್ವಾರಿ ಮತ್ತು ಕ್ರಷರ್ ಕಾರ್ಮಿಕರಷ್ಟೇ ಅಲ್ಲ, ಈ ಉದ್ಯಮದೊಂದಿಗೆ ನೇರವಾಗಿ ಹಾಗೂ ಪರೋಕ್ಷವಾಗಿ ಬದುಕು ಕಟ್ಟಿಕೊಂಡಿರುವ ಜೆಸಿಬಿ, ಟಿಪ್ಪರ್, ಲಾರಿ ಹಾಗೂ ಇತರ ವಾಹನಗಳ ಚಾಲಕರು, ಮಾಲೀಕರು ಮತ್ತು ಸಹಾಯಕ ಕಾರ್ಮಿಕರಿಗೂ ಬಂದ್ ಬಿಸಿ ತಟ್ಟಿದೆ. ಜಲ್ಲಿ ಕಲ್ಲು ಮತ್ತು ಎಂ-ಸ್ಯಾಂಡ್ ಸಾಗಣೆ ಸ್ಥಗಿತಗೊಂಡಿರುವುದರಿಂದ ಐದು ಲಕ್ಷಕ್ಕೂ ಅಧಿಕ ವಾಹನಗಳ ಕಾರ್ಯಾಚರಣೆಯ ಮೇಲೂ ಪರಿಣಾಮ ಬೀರಿದೆ ಎಂದು ಉದ್ಯಮ ವಲಯ ತಿಳಿಸಿದೆ.
ಕೆಲಸವಿಲ್ಲ… ಕೂಲಿಯಿಲ್ಲ… ಬದುಕು ಹೇಗೆ?
“ಪ್ರತಿದಿನ ದುಡಿದರೆ ಮಾತ್ರ ಮನೆಯಲ್ಲಿ ಒಲೆ ಹೊತ್ತುತ್ತದೆ. ಮೂರು ದಿನಗಳಿಂದ ಕೆಲಸವೇ ಇಲ್ಲ. ಮಕ್ಕಳ ಊಟ, ಮನೆಯ ಖರ್ಚು, ಸಾಲದ ಕಂತು—ಎಲ್ಲವನ್ನೂ ಹೇಗೆ ನಿಭಾಯಿಸಬೇಕು ಎಂಬ ಚಿಂತೆ ಕಾಡುತ್ತಿದೆ” ಎನ್ನುವುದು ಕಾರ್ಮಿಕರ ಅಳಲು.
ಕ್ವಾರಿ ಮತ್ತು ಕ್ರಷರ್ ಘಟಕಗಳ ಬಂದ್ನಿಂದ ಕಾರ್ಮಿಕರ ಕುಟುಂಬಗಳಲ್ಲಿ ಆರ್ಥಿಕ ಸಂಕಷ್ಟ ಉಲ್ಬಣಿಸುತ್ತಿದ್ದು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಅಭಿವೃದ್ಧಿ ಕಾಮಗಾರಿಗಳಿಗೂ ಹೊಡೆತ
ಜಲ್ಲಿ ಕಲ್ಲು ಮತ್ತು ಎಂ-ಸ್ಯಾಂಡ್ ಪೂರೈಕೆ ಸ್ಥಗಿತಗೊಂಡಿರುವುದರಿಂದ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳು ಹಾಗೂ ವಿವಿಧ ನಿರ್ಮಾಣ ಹಂತದ ಕಾಮಗಾರಿಗಳ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ. ರಸ್ತೆ, ಕಟ್ಟಡ, ಸೇತುವೆ ಸೇರಿದಂತೆ ಹಲವು ಕಾಮಗಾರಿಗಳಿಗೆ ಅಗತ್ಯವಿರುವ ನಿರ್ಮಾಣ ಸಾಮಗ್ರಿಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ಒಂದೆಡೆ ಕ್ವಾರಿ ಮತ್ತು ಕ್ರಷರ್ ಘಟಕಗಳು ಬಂದ್ ಆಗಿರುವುದರಿಂದ ಸರ್ಕಾರಕ್ಕೆ ರಾಜಧನ ಸಂಗ್ರಹದಲ್ಲಿ ನಷ್ಟವಾಗುತ್ತಿದ್ದರೆ, ಮತ್ತೊಂದೆಡೆ ನಿರ್ಮಾಣ ಕಾಮಗಾರಿಗಳಿಗೆ ಅಗತ್ಯವಿರುವ ಜಲ್ಲಿ ಮತ್ತು ಎಂ-ಸ್ಯಾಂಡ್ ಕೊರತೆ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಈ ಬಂದ್ ಕೇವಲ ಉದ್ಯಮಕ್ಕೆ ಸೀಮಿತವಾಗದೆ, ಕಾರ್ಮಿಕರಿಂದ ಹಿಡಿದು ನಿರ್ಮಾಣ ಕ್ಷೇತ್ರದವರೆಗೆ ಸರಪಳಿಯಂತೆ ಪರಿಣಾಮ ಬೀರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರ ಕೂಡಲೇ ಕ್ರಮಕ್ಕೆ ಆಗ್ರಹ
ರಾಜ್ಯ ಸರ್ಕಾರ ಕಲ್ಲು ಗಣಿ ಮತ್ತು ಕ್ರಷರ್ ಮಾಲೀಕರ ಬೇಡಿಕೆಗಳನ್ನು ತುರ್ತಾಗಿ ಪರಿಶೀಲಿಸಿ, ರಾಜಧನ ಪದ್ಧತಿ ಸೇರಿದಂತೆ ಕಾನೂನುಬದ್ಧವಾಗಿ ಉದ್ಯಮ ನಡೆಸಲು ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಸಾವಿರಾರು ಘಟಕಗಳ ಸ್ಥಗಿತದಿಂದ ಸಂಕಷ್ಟಕ್ಕೊಳಗಾಗಿರುವ ಕಾರ್ಮಿಕರು ಹಾಗೂ ಅವರ ಕುಟುಂಬಗಳ ಹಿತದೃಷ್ಟಿಯಿಂದಲೂ ಸರ್ಕಾರ ಶೀಘ್ರ ಕ್ರಮ ಕೈಗೊಂಡು ಘಟಕಗಳ ಪುನರಾರಂಭಕ್ಕೆ ದಾರಿ ಮಾಡಿಕೊಡಬೇಕು ಎಂಬ ಆಗ್ರಹ ಜೋರಾಗಿದೆ.
ರಾಜ್ಯದಲ್ಲಿ 8300 ಕ್ಕೂ ಹೆಚ್ಚು ಕಲ್ಲು ಕ್ವಾರಿ ಹಾಗೂ ಕ್ರಷರ್ ಘಟಕಗಳಿವೆ. ಎರಡು ಕಡೆ ರಾಜಧನ ಪಡೆಯುವ ನೀತಿಯಿಂದ ನಷ್ಟವಾಗುತ್ತಿದೆ. ರಾಜ್ಯ ಏಕರೂಪದ ರಾಜಧನ ಪಡೆಯಬೇಕು. ಅದೆ ರೀತಿ ಕಾನೂನು ಬದ್ದ ಉದ್ಯಮಕ್ಕೆ ಅವಕಾಶ ಕಲ್ಲಿಸಬೇಕಿದೆ. ಈಗಾಗಲೇ ಘಟಕಗಳನ್ನು ಬಂದ್ ಮಾಡಿ ಹೋರಾಟ ಮಾಡಲಾಗುತ್ತಿದೆ. ಇದರಿಂದ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಸರಕಾರಕ್ಕೆ ಕೂಡ ರಾಜಧನ ಸಂಗ್ರಹ ನಷ್ಟವಾಗುತ್ತಿದೆ. ಸರಕಾರ ಕಾಮಗಾರಿ, ನಿರ್ಮಾಣ ಹಂತದ ಕಟ್ಟಡಗಳಿಗೆ ಜಲ್ಲಿಕಲ್ಲು ಹಾಗೂ ಎಂ ಸ್ಯಾಂಡ್ ಪೂರೈಕೆ ಬಂದ್ ಮಾಡಲಾಗಿದೆ. ಕೂಡಲೇ ಸರಕಾರ ನಮ್ಮ ಬೇಡಿಕೆ ಈಡೇಸುವಂತೆ ಆಗ್ರಹ ಮಾಡಿದ್ದಾರೆ.
ಶಿವಪ್ರಸಾದ್ ಕರ್ನಾಟಕ ರಾಜ್ಯ ಕಲ್ಲು ಕ್ವಾರಿ ಹಾಗೂ ಕ್ರಷರ್ ಮಾಲಿಕರ ಒಕ್ಕೂಟದ ರಾಜ್ಯಾಧ್ಯಕ್ಷರು ಬೆಂಗಳೂರು.













Leave a Reply