
ಸುದ್ದಿ ಬೆಳಕು ವಾರ್ತೆ
ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ ನಾಲ್ವದಡಗಿ ತಾಂಡಾದಲ್ಲಿ ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿಂದ ನಿವಾಸಿಗಳು ಕಲುಷಿತ ನೀರಿನ ಮಧ್ಯೆಯೇ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಆರೋಪಿಸಿದರು.
ಭಾನುವಾರ ಬೆಳಿಗ್ಗೆ ತಾಂಡಕ್ಕೆ ದಿಢೀರ್ ಭೇಟಿ ನೀಡಿ ಕಾಲ್ನಡಿಗೆಯಲ್ಲಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯ ದೊರೆತು 78 ವರ್ಷಗಳಾದರೂ ತಾಂಡಾ ಅಭಿವೃದ್ಧಿಯಿಂದ ವಂಚಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚರಂಡಿ ನೀರಿನಲ್ಲಿ ಬದುಕು
ತಾಂಡಾದಲ್ಲಿ ಸಮರ್ಪಕ ಸಿಸಿ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛತಾ ವ್ಯವಸ್ಥೆ ಇಲ್ಲದ ಕಾರಣ ರಸ್ತೆಗಳಲ್ಲಿ ಚರಂಡಿ ನೀರು ನಿಂತು ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಸೊಳ್ಳೆಗಳ ಕಾಟದಿಂದ ಜನರು ಮತ್ತು ಜಾನುವಾರುಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ವಿನೂತನ ಪ್ರತಿಭಟನೆ
ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿಯೂ ಆಗಿರುವ ಉಮೇಶ ಕೆ. ಮುದ್ನಾಳ್ ಅವರು ಕೈಯಲ್ಲಿ ಕಾಲಿಕೋಲು ಹಿಡಿದು ತಾಂಡದ ಮಹಿಳೆಯರು ಹಾಗೂ ಗ್ರಾಮಸ್ಥರೊಂದಿಗೆ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಭಿವೃದ್ಧಿ ಕಾಮಗಾರಿಗಳ ನಿರ್ಲಕ್ಷ್ಯ ಆರೋಪ
ತಾಂಡಾದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿದ್ದು, ಮೂರು ಕೈಪಂಪುಗಳು ಕೆಟ್ಟು ನಿಂತಿವೆ. ಉದ್ಘಾಟನೆ ಆಗದೆ ಕುಡಿಯುವ ನೀರಿನ ಟ್ಯಾಂಕ್ ಬಳಕೆಗೆ ಬಂದಿಲ್ಲ. ಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಹಾಗೂ ಜೋತು ಬಿದ್ದ ವಿದ್ಯುತ್ ತಂತಿಗಳು ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡಿವೆ ಎಂದು ಆರೋಪಿಸಿದರು.
ಮಹಿಳೆಯರಿಗೆ ಶೌಚಾಲಯದ ಕೊರತೆ, ಸಮರ್ಪಕ ಕುಡಿಯುವ ನೀರಿನ ಪೈಪ್‌ಲೈನ್ ಇಲ್ಲದಿರುವುದು, ಮುಖ್ಯ ರಸ್ತೆಯಿಂದ ತಾಂಡಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಜಾಲಿಕಂಟಿಗಳಿಂದ ಆವೃತಗೊಂಡು ತಗ್ಗು-ಗುಂಡಿಗಳಿಂದ ಹದಗೆಟ್ಟಿರುವುದರಿಂದ ಸಾರ್ವಜನಿಕರು ಹಾಗೂ ರೈತರಿಗೆ ಸಂಚಾರ ದುಸ್ತರವಾಗಿದೆ ಎಂದು ದೂರಿದರು.
ಅಭಿವೃದ್ಧಿ ಅನುದಾನದ ಬಗ್ಗೆ ಪ್ರಶ್ನೆ
ತಾಂಡಾ ಅಭಿವೃದ್ಧಿಗೆ ಲಕ್ಷಾಂತರ ರೂಪಾಯಿ ಅನುದಾನ ಬಿಡುಗಡೆಯಾಗಿದ್ದರೂ ಅದರ ಫಲಿತಾಂಶ ಎಲ್ಲಿಯೂ ಕಾಣುತ್ತಿಲ್ಲ. ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾದ ಹಣ ಯಾರ ಮನೆ ತಿಜೋರಿಗೆ ಸೇರಿದೆ ಎಂಬ ಅನುಮಾನ ಮೂಡಿದೆ ಎಂದು ಉಮೇಶ ಕೆ. ಮುದ್ನಾಳ್ ಆರೋಪಿಸಿದರು.
24 ಗಂಟೆಯ ಗಡುವು
ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸಬೇಕು. 24 ಗಂಟೆಗಳೊಳಗೆ ಕ್ರಮ ಕೈಗೊಳ್ಳದಿದ್ದರೆ ಯಾದಗಿರಿ–ಶಹಾಪುರ ಮುಖ್ಯರಸ್ತೆಯ ನಾಯ್ಕಲ್ ಸರ್ಕಲ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಪವನ್, ವಿಶಾಲ, ಗಂಗಾರಾಮ ಕಾರಬಾರಿ, ಹಿರು ನಾಯಕ, ಜಾಕ್ಯಾ, ಮೌನೇಶ, ಶಿವು, ಯೋಗರಾಜ, ಅಜಯ, ಕುಮಾರ, ಬಸವರಾಜ, ಈಶ್ವರ, ಕೀರಣ, ಮಹೇಶ, ಇಂದ್ರಪ್ಪ, ನಿರಾಜ್, ಆಕಾಶ, ರೆಡ್ಡಿ, ಅರ್ಜುನ, ವಿನೋದ, ಪವನ್, ಶೀಲಿಬಾಯಿ, ಲಕ್ಕಿಬಾಯಿ, ತಾರಿಬಾಯಿ, ನೀಳಿಬಾಯಿ, ಜ್ಯೋತಿಬಾಯಿ, ಸವಿತಾಬಾಯಿ, ಮುನ್ನಿಬಾಯಿ, ಜಲ್ಲಿಬಾಯಿ, ಶಾರಾಬಾಯಿ, ಸೀತಾಬಾಯಿ ಸೇರಿದಂತೆ ತಾಂಡಾದ ಮುಖಂಡರು, ಯುವಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು.











Leave a Reply