ರೈತರ ಅಭಿವೃದ್ಧಿಗೆ ಸದಾ ಸಿದ್ಧ: ಶಾಂತರಡ್ಡಿ ಚೌದ್ರಿ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರು, ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆ ಯಾದಗಿರಿ ಹಾಗೂ ನೀರು ಬಳಕೆದಾರರ ಸಹಕಾರ ಸಂಘ ನಿ., ಮುದನೂರು (ಬಿ) ಇವರ ಸಂಯುಕ್ತ ಆಶ್ರಯದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಕ್ಲಸ್ಟರ್ ತರಬೇತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಶಾಂತರಡ್ಡಿ ಚೌದ್ರಿ (ಮುದನೂರು ಬಿ), ರಾಜ್ಯದಲ್ಲಿ ಸಹಕಾರ ಕ್ಷೇತ್ರವು ರೈತರ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಆಧಾರವಾಗಿದ್ದು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ವಿವಿಧ ಸಹಕಾರ ಸಂಘಗಳ ಮೂಲಕ ರೈತರನ್ನು ಆರ್ಥಿಕವಾಗಿ ಸಬಲಗೊಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕೂಡ ಜಿಲ್ಲೆಯ ರೈತರ ಅಭಿವೃದ್ಧಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಾರೆಡ್ಡಿ ಎಸ್. ಯಡ್ಡಳ್ಳಿ, ಅಧ್ಯಕ್ಷರು, ನೀರು ಬಳಕೆದಾರರ ಸಹಕಾರ ಸಂಘ ನಿ., ಕೆಂಭಾವಿ–2 ವಹಿಸಿದ್ದರು.

ಜಿಲ್ಲಾ ಸಹಕಾರ ಶಿಕ್ಷಣಾಧಿಕಾರಿ ಸುಜಾತ ಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಒಕ್ಕೂಟದ ಕಾರ್ಯಚಟುವಟಿಕೆಗಳು ಮತ್ತು ರೈತಪರ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ನೀರು ಬಳಕೆದಾರರ ಸಂಘಗಳ ಮಹತ್ವ

ವಿಶೇಷ ಉಪನ್ಯಾಸ ನೀಡಿದ ಸಹಕಾರ ಸಂಘಗಳ ಹಿರಿಯ ನಿರೀಕ್ಷಕ ಶಂಕರ ಅವರು, ನೀರು ಬಳಕೆದಾರರ ಸಹಕಾರ ಸಂಘಗಳು ನೀರಾವರಿ ನೀರಿನ ಸಮರ್ಪಕ ಬಳಕೆ, ನ್ಯಾಯಸಮ್ಮತ ಹಂಚಿಕೆ ಹಾಗೂ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ತಿಳಿಸಿದರು.

ನೀರಿನ ವ್ಯರ್ಥ ಬಳಕೆಯನ್ನು ತಡೆದು ಸಮರ್ಪಕ ಬಳಕೆಗೆ ಉತ್ತೇಜನ ನೀಡುವುದು, ಕಾಲುವೆಗಳು ಹಾಗೂ ನೀರಾವರಿ ವ್ಯವಸ್ಥೆಗಳ ನಿರ್ವಹಣೆಯಲ್ಲಿ ರೈತರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು, ಕೃಷಿ ಹಾಗೂ ಪರಿಸರ ಸಂರಕ್ಷಣೆಗೆ ಸಹಕಾರಿಯಾಗುವುದು, ರೈತರಲ್ಲಿ ಸಹಕಾರ, ಶಿಸ್ತು ಮತ್ತು ಜವಾಬ್ದಾರಿಯ ಮನೋಭಾವ ಬೆಳೆಸುವುದು ಹಾಗೂ ನೀರಾವರಿ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಇಂತಹ ಸಂಘಗಳು ಅತ್ಯಗತ್ಯ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕೆ.ಬಿ.ಜೆ.ಎನ್.ಎಲ್. ಉಪ ವಿಭಾಗ ಮುದನೂರು (ಬಿ) ಸಹಾಯಕ ನಿರ್ವಾಹಕ ಶರಣು ಬಳೂರಗಿ, ಅಧೀಕ್ಷಕ ಮಹೇಶ್, ನೀರು ಬಳಕೆದಾರರ ಸಹಕಾರ ಸಂಘಗಳ ಕಾರ್ಯದರ್ಶಿಗಳಾದ ಸಯ್ಯದ್ ಪಿ. ತಾಳಿಕೋಟಿ, ಗಂಗಾಧರ ಕುಂಭಾರ, ಬಂದೇನವಾಜ್ ಮಕಂದರ್, ಮಲ್ಲಣ್ಣ ಬಡಿಗೇರ, ಮಲ್ಲಿಕಾರ್ಜುನ ಅರಿಕೇರಿ ಸೇರಿದಂತೆ ಹಿರಿಯ ಹಾಗೂ ಕಿರಿಯ ಕಾರ್ಯದರ್ಶಿಗಳು, ಸಂಘದ ಸದಸ್ಯರು ಮತ್ತು ರೈತರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಹಳ್ಳೆಪ್ಪ, ಕಾರ್ಯದರ್ಶಿ, ನೀರು ಬಳಕೆದಾರರ ಸಹಕಾರ ಸಂಘ ನಿ., ತೆಗ್ಗಳ್ಳಿ ಅವರು ನಿರೂಪಿಸಿದರು. ಸಿದ್ದನಗೌಡ ಪಾಟೀಲ, ದ್ವಿತೀಯ ದರ್ಜೆ ಸಹಾಯಕ, ಜಿಲ್ಲಾ ಸಹಕಾರ ಒಕ್ಕೂಟ, ವಂದನಾರ್ಪಣೆ ಸಲ್ಲಿಸಿದರು.

You Might Also Like

Leave a Reply

Your email address will not be published. Required fields are marked *

Suddi Belaku