ಬರ ಘೋಷಣೆಗೆ ಆಗ್ರಹ: ಯಾದಗಿರಿ ಕೆಡಿಪಿ ಸಭೆ ಬಹಿಷ್ಕರಿಸಿದ ಶಾಸಕ ಕಂದಕೂರು

Posted by

 ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಗುರುಮಠಕಲ್ ಹಾಗೂ ಯಾದಗಿರಿ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸದೆ ರಾಜ್ಯ ಸರ್ಕಾರ ತಾರತಮ್ಯ ಎಸಗಿದೆ ಎಂದು ಆರೋಪಿಸಿ, ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರು ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಸಭೆಯನ್ನು ಬಹಿಷ್ಕರಿಸಿದ್ದಾರೆ.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ತ್ರೈಮಾಸಿಕ ಕೆಡಿಪಿ ಸಭೆ ಆಯೋಜಿಸಲಾಗಿತ್ತು. ಸಭೆಯ ಆರಂಭಕ್ಕೂ ಮುನ್ನವೇ ಶಾಸಕ ಶರಣಗೌಡ ಕಂದಕೂರು ಅವರು ಬರ ಘೋಷಣೆ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ತೀವ್ರವಾಗಿ ಖಂಡಿಸಿ ಸಭೆಗೆ ಗೈರಾಗುವ ಮೂಲಕ ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು.

“ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮುಂಗಾರು ಮಳೆಯಾಗದೆ ಶೇ. ೮೦ ಕ್ಕೂ ಹೆಚ್ಚು ಬೆಳೆ ಒಣಗಿ ನಿಂತಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲೂ ಗುರುಮಠಕಲ್ ಮತ್ತು ಯಾದಗಿರಿ ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದು ಅನ್ನದಾತರಿಗೆ ಬಗೆದ ಮಹಾದ್ರೋಹ. ರೈತರ ಕಣ್ಣೀರಿಗೆ ಸ್ಪಂದಿಸದ ಸರ್ಕಾರದ ಕೆಡಿಪಿ ಸಭೆಯಲ್ಲಿ ಭಾಗವಹಿಸುವುದರಲ್ಲಿ ಅರ್ಥವಿಲ್ಲ,” ಎಂದು ಕಂದಕೂರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಶಾಸಕ ಶರಣಗೌಡ ಕಂದಕೂರು ಅವರ ಸಭಾ ಬಹಿಷ್ಕಾರದ ನಡುವೆಯೇ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಕಂದಾಯ, ಕೃಷಿ, ತೋಟಗಾರಿಕೆ, ಪಂಚಾಯತ್ ರಾಜ್ ಹಾಗೂ ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಕೈಗೊಂಡರು. ಜಿಲ್ಲೆಯಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಲಭ್ಯತೆ ಹಾಗೂ ಬರ ಪರಿಹಾರ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಜನರಿಗೆ ಯಾವುದೇ ತೊಂದರೆಯಾಗದಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

You Might Also Like

Leave a Reply

Your email address will not be published. Required fields are marked *

Suddi Belaku