ಕೆಂಭಾವಿಯಲ್ಲಿ ಟ್ಯಾಕ್ಸಿ ನಿಲ್ದಾಣ ನಿರ್ಮಾಣಕ್ಕೆ ಚಾಲಕರ ಒಕ್ಕೂಟ ಮನವಿ

Posted by

ಸುದ್ದಿ ಬೆಳಕು ವಾರ್ತೆ

ಸುರಪುರ : ಪಟ್ಟಣದಲ್ಲಿ ಹೆಚ್ಚುತ್ತಿರುವ ಜನಸಂದಣಿ ಹಾಗೂ ವಾಹನ ದಟ್ಟಣೆಯ ನಡುವೆ ಟ್ಯಾಕ್ಸಿ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳವಿಲ್ಲದೆ ಸಾರ್ವಜನಿಕರಿಗೆ ಮತ್ತು ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದ್ದು, ಶ್ರೀ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಆವರಣ ಗೋಡೆ ಎದುರಿಗಿರುವ ಸರ್ಕಾರಿ ಜಾಗದಲ್ಲಿ ಸುಸಜ್ಜಿತ ಟ್ಯಾಕ್ಸಿ ನಿಲ್ದಾಣ ನಿರ್ಮಿಸಿಕೊಡಲು ಅನುಕೂಲ ಕಲ್ಪಿಸಬೇಕು ಎಂದು ಕರ್ನಾಟಕ ಚಾಲಕರ ಒಕ್ಕೂಟವು (ರಿ.) ಕೆಂಭಾವಿ ಪುರಸಭೆಗೆ ಲಿಖಿತ ಮನವಿ ಸಲ್ಲಿಸಿದೆ.

ಸುರಪುರ ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಕೆಂಭಾವಿ ಪಟ್ಟಣವು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಆದರೆ ಪಟ್ಟಣದಲ್ಲಿ ಟ್ಯಾಕ್ಸಿ ಕಾರುಗಳ ನಿಲುಗಡೆಗೆ ನಿರ್ದಿಷ್ಟ ನಿಲ್ದಾಣವಿಲ್ಲದ ಕಾರಣ ಅನಿವಾರ್ಯವಾಗಿ ರಸ್ತೆ ಬದಿಯ ಅಂಗಡಿ-ಮುಂಗಟ್ಟುಗಳ ಎದುರು ವಾಹನಗಳನ್ನು ನಿಲ್ಲಿಸಬೇಕಾದ ಪರಿಸ್ಥಿತಿ ಇದೆ. ಇದರಿಂದ ಅಂಗಡಿಕಾರರ ದೈನಂದಿನ ವ್ಯಾಪಾರ-ವಹಿವಾಟಿಗೆ ಅಡಚಣೆಯಾಗುತ್ತಿರುವುದಲ್ಲದೆ, ಸುಗಮ ಸಂಚಾರಕ್ಕೂ ಅಡ್ಡಿಯುಂಟಾಗುತ್ತಿದೆ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ.

ಪುರಸಭೆ ವ್ಯಾಪ್ತಿಯಲ್ಲಿ ಬರುವ ಶ್ರೀ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಕಾಂಪೌಂಡ್ ಗೋಡೆಯ ಮುಂಭಾಗದಲ್ಲಿ ಸೂಕ್ತ ಸರ್ಕಾರಿ ಖಾಲಿ ಜಾಗವಿದ್ದು, ಆ ಸ್ಥಳವನ್ನು ಟ್ಯಾಕ್ಸಿ ನಿಲ್ದಾಣಕ್ಕೆ ಮೀಸಲಿಟ್ಟು ಅಭಿವೃದ್ಧಿಪಡಿಸಿದರೆ ಚಾಲಕರಿಗೆ, ಸಾರ್ವಜನಿಕರಿಗೆ ಹಾಗೂ ಪಟ್ಟಣದ ಸಂಚಾರ ನಿಯಂತ್ರಣಕ್ಕೆ ಅನುಕೂಲವಾಗಲಿದೆ. ಈ ವಿಷಯವನ್ನು ಪುರಸಭೆ ಆಡಳಿತವು ಗಂಭೀರವಾಗಿ ಪರಿಗಣಿಸಿ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟದ ಪದಾಧಿಕಾರಿಗಳು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಕೆಂಭಾವಿ ವಲಯ ಕರ್ನಾಟಕ ಚಾಲಕರ ಒಕ್ಕೂಟದ ಅಧ್ಯಕ್ಷ ಎಚ್.ಎಂ. ಪಟೇಲ್ ಮಾಲಗತ್ತಿ, ಗೌರವಾಧ್ಯಕ್ಷ ಮೈಬೂಬ್ ಸಾಬ್ ದೇಫೆದಾರ್, ಉಪಾಧ್ಯಕ್ಷರಾದ ರಮೇಶ್ ಎಸ್. ಖಾನಾಪುರ, ಮಲ್ಲಿಕಾರ್ಜುನ ತಳಹಳ್ಳಿ, ಸಿದ್ದಣ್ಣ ಚಿಂಚೋಳಿ, ಪ್ರಚಾರ ಸಮಿತಿ ಅಧ್ಯಕ್ಷ ಗುರು ಅಂಗಡಿ, ಸದಸ್ಯ ಶರಣು ಮಾಲಹಳ್ಳಿಕಾರ್ ಸೇರಿದಂತೆ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

You Might Also Like

Leave a Reply

Your email address will not be published. Required fields are marked *

Suddi Belaku