ಕಲ್ಯಾಣ ಕರ್ನಾಟಕ ಅಸಮತೋಲನ ನಿವಾರಣೆಗೆ ಸೆ.17ರಂದು ಸಂಕಲ್ಪ ಸಮಾವೇಶ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮುಂದುವರಿದಿರುವ ಪ್ರಾದೇಶಿಕ ಅಸಮತೋಲನ ನಿವಾರಣೆ ಹಾಗೂ ಸಂವಿಧಾನದ ಕಲಂ 371(ಜೆ) ಸಮರ್ಪಕ ಜಾರಿಗೆ ಆಗ್ರಹಿಸಿ ಸೆ.17ರಂದು ಕಲಬುರಗಿಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣಾ ಸಂಕಲ್ಪ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಯ್ಯ ಕಮತಗಿ ತಿಳಿಸಿದರು.

ಭಾನುವಾರ ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂಪಾಯಿ ಅನುದಾನ ವ್ಯಯವಾಗಿದ್ದರೂ ಶಿಕ್ಷಣ, ಆರೋಗ್ಯ, ಉದ್ಯೋಗ, ನೀರಾವರಿ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ನಿರೀಕ್ಷಿತ ಪ್ರಗತಿ ಕಂಡುಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಡೇಚೂರು–ಬಾಡಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ ಕೆಲವು ರಾಸಾಯನಿಕ ಕಾರ್ಖಾನೆಗಳಿಂದ ತ್ಯಾಜ್ಯ ನೀರು ಹೊರಹರಿಯುತ್ತಿದ್ದು, ಇದರಿಂದ ಜನರು ಹಾಗೂ ಜಾನುವಾರುಗಳ ಆರೋಗ್ಯ ಮತ್ತು ಜೀವಕ್ಕೆ ಅಪಾಯ ಎದುರಾಗುವ ಆತಂಕವಿದೆ. ಅಲ್ಲದೆ ಅಂತರ್ಜಲದ ಗುಣಮಟ್ಟವೂ ಹದಗೆಡುವ ಸಾಧ್ಯತೆ ಇದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಯಾದಗಿರಿ ನಗರದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ವಾಸಿಸುತ್ತಿದ್ದು, ನಗರಸಭೆಯಿಂದ ಪೂರೈಕೆಯಾಗುತ್ತಿರುವ ನೀರಿನ ಗುಣಮಟ್ಟದ ಬಗ್ಗೆ ಸಾರ್ವಜನಿಕರಲ್ಲಿ ಆತಂಕವಿದೆ. ಕಲುಷಿತ ನೀರಿನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಭೀಮಾ ನದಿಯಿಂದ ಯಾದಗಿರಿ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಜನರಿಗೆ ಸುರಕ್ಷಿತ ನೀರು ಒದಗಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸೆ.17ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಲಬುರಗಿಗೆ ಆಗಮಿಸುವ ಹಿನ್ನೆಲೆಯಲ್ಲಿ, ಸಮಿತಿಯ ನಿಯೋಗ ಅವರನ್ನು ಭೇಟಿ ಮಾಡಿ ಕಲ್ಯಾಣ ಕರ್ನಾಟಕದ ವಾಸ್ತವಿಕ ಪರಿಸ್ಥಿತಿ ಹಾಗೂ ವಿವಿಧ ಲೋಪದೋಷಗಳನ್ನು ಮನವರಿಕೆ ಮಾಡಿಕೊಟ್ಟು, ಅವುಗಳನ್ನು ಸರಿಪಡಿಸುವಂತೆ ಮನವಿ ಸಲ್ಲಿಸಲಿದೆ ಎಂದು ತಿಳಿಸಿದರು.

371(ಜೆ) ಜಾರಿಯಾದ ಬಳಿಕ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಗಿದ್ದು, ಪ್ರಾದೇಶಿಕ ಅಸಮತೋಲನ ನಿವಾರಣೆ ಇದರ ಪ್ರಮುಖ ಉದ್ದೇಶವಾಗಿದೆ. ಆದರೆ ಮಂಡಳಿಯ ಅನುದಾನವನ್ನು ವೈಜ್ಞಾನಿಕವಾಗಿ ಬಳಸದೆ ಕೇವಲ ಕಾಮಗಾರಿಗಳಿಗೆ ಸೀಮಿತಗೊಳಿಸಲಾಗುತ್ತಿದೆ. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದಂತಹ ಮಾನವ ಅಭಿವೃದ್ಧಿ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.

ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ಕೊರತೆ, ವೈದ್ಯಕೀಯ ಸಿಬ್ಬಂದಿ ಅಭಾವ, ವಿಶ್ವವಿದ್ಯಾಲಯಗಳಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕೊರತೆ ಮತ್ತು ನೀರಾವರಿ ಯೋಜನೆಗಳ ವಿಳಂಬದಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಯುವಜನರು, ರೈತರು, ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರು ಒಗ್ಗೂಡಿ ಹೋರಾಟ ರೂಪಿಸಬೇಕು ಎಂದು ಕರೆ ನೀಡಿದರು.

ಸೆ.17ರಂದು ಕಲಬುರಗಿಯ ಶ್ರೀ ಶರಣಬಸವೇಶ್ವರ ವಿಶ್ವವಿದ್ಯಾಲಯದ ದೊಡ್ಡ ಬಸವಪ್ಪ ಅಪ್ಪ ಸಭಾ ಮಂಟಪದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಸುಮಾರು 2 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಮಲ್ಲಯ್ಯ ಕಮತಗಿ ತಿಳಿಸಿದರು.

ಸಮಿತಿಯ ಪ್ರಮುಖ ಬೇಡಿಕೆಗಳು

ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ 30 ಸಾವಿರ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು.

371(ಜೆ) ಸಮರ್ಪಕ ಜಾರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು.

ರಾಯಚೂರಿನಲ್ಲಿ VIMS ಮಂಜೂರಿಗೆ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ತರಬೇಕು.

ಕೆಕೆಆರ್‌ಡಿಬಿ ಅನುದಾನ ಬಳಕೆಯ ಕಠಿಣ ನಿಯಮಗಳನ್ನು ಸರಳೀಕರಿಸಿ, ಮಂಡಳಿಯನ್ನು ಜನರಿಗೆ ಉತ್ತರದಾಯಿಯಾಗಿಸಬೇಕು.

ಕೃಷ್ಣಾ ಕೊಳ್ಳದ ಕರ್ನಾಟಕದ ಪಾಲಿನ ನೀರನ್ನು ಸಮರ್ಪಕವಾಗಿ ಬಳಸಿ 15 ಲಕ್ಷ ಎಕರೆ ಭೂಮಿಗೆ ನೀರಾವರಿ ಒದಗಿಸಬೇಕು.

ಕಲ್ಯಾಣ ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಬೇಕು.

ಪ್ರಯೋಗಾಲಯ, ಗ್ರಂಥಾಲಯ ಹಾಗೂ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಬೇಕು.

ನಿರುದ್ಯೋಗಿ ವಿದ್ಯಾವಂತ ಯುವಕರಿಗಾಗಿ ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು.

ಹೈನುಗಾರಿಕೆಗೆ ವಿಶೇಷ ಪ್ರೋತ್ಸಾಹ ಯೋಜನೆ ಘೋಷಿಸಬೇಕು.

ಬಳ್ಳಾರಿಯ ಜೀನ್ಸ್ ಉದ್ಯಮವನ್ನು ಬಲಪಡಿಸಿ ಇಡೀ ಕಲ್ಯಾಣ ಕರ್ನಾಟಕಕ್ಕೆ ವಿಸ್ತರಿಸಬೇಕು.ಸುದ್ದಿಗೋಷ್ಠಿಯಲ್ಲಿ ತಿಪ್ಪಣ್ಣ ಸುಕಲ್ ಸುರಪುರ, ಅಶೋಕ್ ವಾಟಕರ್, ಸಿದ್ದಲಿಂಗ ನಾಯಕ್ ಬೆಳಗುಂದಿ, ಅಹ್ಮದ್ ಪಠಾಣ್, ಯಲಪ್ಪ ಮಳಿಕೇರಿ, ಗಿರಿಯಪ್ಪಗೌಡ ಬಡಿತಿಯಾಳ ಶಹಾಪುರ, ಸೈಯದ್ ಕಾದ್ರಿ, ಸಿದ್ದಲಿಂಗ ರೆಡ್ಡಿ ಭೀಮನಹಳ್ಳಿ, ಶರಣಪ್ಪ ಜಾಕನಹಳ್ಳಿ, ದೊಡ್ಡಯ್ಯ ನಾಯಕ ಹಳಿಗೇರ, ಮಲ್ಲಯ್ಯ ಮಗ್ಗ, ಚಂದ್ರಪ್ಪ ನಾಯಕ್, ಆಫೀಜ್ ಅಬ್ದುಲ್ ಮಾತಿನಿ ಪಟೇಲ್ ಸೇರಿದಂತೆ ಸಮಿತಿಯ ಮುಖಂಡರು ಉಪಸ್ಥಿತರಿದ್ದರು.

You Might Also Like

Leave a Reply

Your email address will not be published. Required fields are marked *

Suddi Belaku