ಕಡೇಚೂರು–ಬಾಡಿಯಾಳ ವಿಷಾನಿಲ ದುರಂತ: ಮೃತ ಕಾರ್ಮಿಕರ ಕುಟುಂಬಕ್ಕೆ ಸಂಸದ ದೊಡ್ಡಮನಿ ಸಂತಾಪ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಇಲ್ಲಿನ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ಫಾರ್ಮಾ ಕಂಪನಿಯೊಂದರಲ್ಲಿ ನಿನ್ನೆ ಸಂಭವಿಸಿದ ಸಲ್ಫರ್ ಡೈಆಕ್ಸೈಡ್ ಅನಿಲ ಸೋರಿಕೆಯಿಂದಾಗಿ ಕರ್ತವ್ಯನಿರತ ಮೂವರು ಕಾರ್ಮಿಕರು ಮೃತಪಟ್ಟು, ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿರುವ ದುರಂತಕ್ಕೆ ಕಲಬುರಗಿ ಲೋಕಸಭಾ ಕ್ಷೇತ್ರದ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ತೀವ್ರ ಕಂಬನಿ ಮಿಡಿದಿದ್ದಾರೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಯಾದಗಿರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿದ ಸಂಸದರು, ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕರಿಗೆ ತಕ್ಷಣವೇ ಅತ್ಯುನ್ನತ ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆ ದೊರಕಿಸುವಂತೆ ಸೂಚನೆ ನೀಡಿದರು.

ಫಾರ್ಮಾ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಜೀವರಕ್ಷಣೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಕಟ್ಟುನಿಟ್ಟಿನ ಪರಿಶೀಲನೆ ನಡೆಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದ ಅವರು, ಕಂಪನಿಯು ಭದ್ರತಾ ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸಬೇಕು ಎಂದು ಸ್ಪಷ್ಟಪಡಿಸಿದರು.

ದುರದೃಷ್ಟಕರ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಬಡ ಕಾರ್ಮಿಕರ ಕುಟುಂಬದವರಿಗೆ ಸಾಂತ್ವನ ವ್ಯಕ್ತಪಡಿಸಿದ ಸಂಸದರು, ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲೆಂದು ಹಾರೈಸಿದ್ದಾರೆ.

Leave a Reply

Your email address will not be published. Required fields are marked *

Suddi Belaku