ಜಮಖಂಡಿ : ಸರ್ಕಾರದ ಆದೇಶ ಸಂಖ್ಯೆ 14-8-26ರ ಅನ್ವಯ ರಾಜ್ಯದ 101 ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು, ಈ ಪಟ್ಟಿಯಲ್ಲಿ ಜಮಖಂಡಿ ತಾಲೂಕು ಕೂಡ ಸೇರಿದೆ. ಈ ಹಿನ್ನೆಲೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ರೈತರಿಗೆ ಪಶುಮೇವಿನ ಬೀಜಗಳನ್ನು ವಿತರಿಸಲಾಯಿತು.
ಜಮಖಂಡಿ ಉಪವಿಭಾಗದ ಮಾನ್ಯ ಸಹಾಯಕ ಆಯುಕ್ತರು ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಅ. 26ರಂದು ಹುನ್ನೂರು, ಮೈಗೂರ ಮತ್ತು ಕಡಪಟ್ಟಿ ಗ್ರಾಮದ ರೈತ ಮಹಿಳೆಯರು ಹಾಗೂ ಪುರುಷರಿಗೆ ವಿವಿಧ ತಳಿಯ ಸೂರ್ಯಕಾಂತಿ ಬೀಜಗಳು ಮತ್ತು ಒಂದು ತಳಿಯ ಮೇವಿನ ಬೀಜವಾದ ಗೋವಿನ ಜೋಳದ ಬೀಜಗಳನ್ನು ವಿತರಿಸಲಾಯಿತು.
ಡಾ. ಪ್ರಕಾಶ್ ಗೂಳಪ್ಪಗೋಳ್, ಮುಖ್ಯ ಪಶುವೈದ್ಯಾಧಿಕಾರಿಗಳು, ಇಲಾಖೆಯ ಸಿಬ್ಬಂದಿಯ ಸಮಕ್ಷಮದಲ್ಲಿ ರೈತರಿಗೆ ಮೇವಿನ ಬೀಜಗಳನ್ನು ವಿತರಿಸಿದರು. ಬರಗಾಲದ ಸಂದರ್ಭದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ರೈತರಿಗೆ ನೆರವಾಗುವ ಉದ್ದೇಶದಿಂದ ಮಾನ್ಯ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಮೇವಿನ ಕಿರುಪೊಟ್ಟಣಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕ್ರಮದಿಂದ ಬರಗಾಲದ ಪರಿಸ್ಥಿತಿಯಲ್ಲಿ ಜಾನುವಾರುಗಳ ಮೇವಿನ ಲಭ್ಯತೆ ಹೆಚ್ಚಿಸಲು ಮತ್ತು ರೈತರಿಗೆ ಅನುಕೂಲ ಕಲ್ಪಿಸಲು ಇಲಾಖೆ ಮುಂದಾಗಿದೆ.
Leave a Reply