ಜಮಖಂಡಿಯಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ: ವೀರಶೈವ ಧರ್ಮದ ಮಹತ್ವ ಸಾರಿದ ರಂಭಾಪುರಿ ಜಗದ್ಗುರುಗಳು

Posted by

–

ಸುದ್ದಿ ಬೆಳಕು ವಾರ್ತೆ

ಜಮಖಂಡಿ : ಭಾರತೀಯ ಸಂಸ್ಕೃತಿಯಲ್ಲಿ ಹಲವಾರು ಮತ ಧರ್ಮಗಳು ಬೆಳೆದುಕೊಂಡು ಬಂದಿವೆ.ಇವುಗಳಲ್ಲಿ ಒಂದಾಗಿರುವ ವೀರಶೈವ ಧರ್ಮವು ಒಂದು. ಇದರ ಇತಿಹಾಸ ಮತ್ತು ಬೆಳೆದುಕೊಂಡು ಬಂದ ಪರಂಪರೆ ಅತ್ಯಂತ ಪ್ರಾಚೀನವಾದುದು. ಅಂತರಂಗ ಮತ್ತು ಬಹಿರಂಗ ಶುದ್ದಿಗೆ ಬಹಳಷ್ಟು ಪ್ರಾಮುಖ್ಯತೆ ಕೊಟ್ಟ ಧರ್ಮ ವೀರಶೈವ ಧರ್ಮ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಸೋಮವಾರ ಕಡಪಟ್ಟಿ ಶ್ರೀ ಬಸವೇಶ್ವರ ದೇವಸ್ಥಾನ ಆವರಣ ಜಮಖಂಡಿಯಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಎರಡನೇ ದಿನದ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಯುಗ ಯುಗಗಳ ಪ್ರಾಚೀನ ಇತಿಹಾಸವನ್ನು ಹೊಂದಿದ ವೀರಶೈವ ಧರ್ಮವನ್ನು ಪರಶಿವನ ಪಂಚಮುಖಗಳಿಂದ ಆವಿರ್ಭವಿಸಿದ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಭೂಮಂಡಲದಲ್ಲಿ ಸ್ಥಾಪಿಸಿದರು.ವೀರಶೈವ ಧರ್ಮದ ಪ್ರಾಚೀನ ಇತಿಹಾಸವನ್ನು ಶಿವಾಗಮಗಳಲ್ಲಿ ಕಾಣಬಹುದು. ಜೀವ ಶಿವನಾಗುವ ಅಂಗ ಲಿಂಗವಾಗುವ ದೇಹ ದೇವಾಲಯವಾಗಿಸುವ ಭವಿ ಭಕ್ತನಾಗಿಸುವ ಜಾತಿ ಜ್ಯೋತಿಯಾಗಿಸುವ ಪದಾರ್ಥ ಪ್ರಸಾದವಾಗಿಸುವ ವಿಚಾರಗಳನ್ನು ಬೋಧಿಸುತ್ತದೆ. ಕರ್ಮ ಧರ್ಮವನ್ನಾಗಿಸುವ ಕಾಯಕ ಕೈಲಾಸವಾಗಿಸುವ ನೆಲ ಜಲಗಳನ್ನು ತೀರ್ಥ ಕ್ಷೇತ್ರಗಳನ್ನಾಗಿಸುವ ವಿಶೇಷತೆಯನ್ನು ಹೊಂದಿದೆ.

ಅರ್ಚನೆಗಿಂತ ಅರ್ಪಣೆಗೆ, ವ್ಯಕ್ತಿ ನಿಷ್ಠೆಗಿಂತ ತತ್ವ ನಿಷ್ಠೆಗೆ, ಚರಿತ್ರೆಗಿಂತ ಚಾರಿತ್ರ್ಯಕ್ಕೆ, ಸ್ಥಾವರಕ್ಕಿಂತ ಜಂಗಮಕ್ಕೆ, ದಾನಕ್ಕಿಂತ ದಾಸೋಹಕ್ಕೆ ವಿಶೇಷತೆಯನ್ನು ಕಲ್ಪಿಸಿ ಕೊಟ್ಟ ಕೀರ್ತಿ ವೀರಶೈವ ಧರ್ಮಕ್ಕಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಆಸ್ತಿಗಿಂತ ಆಸಕ್ತಿ ಅವಿಶ್ವಾಸಕ್ಕಿಂತ ಆತ್ಮ ವಿಶ್ವಾಸಕ್ಕೆ ಆತ್ಮೋದ್ದಾರಕ್ಕಿಂತ ಲೋಕೋದ್ದಾರಕ್ಕೆ ಮಹತ್ವವನ್ನು ಕೊಟ್ಟಿದ್ದನ್ನು ಕಾಣಬಹುದು. ಜ್ಞಾನ ಕ್ರಿಯಾತ್ಮಕವಾದ ವೀರಶೈವ ಧರ್ಮ ಸಂಸ್ಕೃತಿಯನ್ನು ಮತ್ತು ಮಾನವ ಧರ್ಮದ ಆದರ್ಶ ಮೌಲ್ಯಗಳನ್ನು ಬೋಧಿಸುವುದೇ ದಸರಾ ಸಮಾರಂಭದ ಗುರಿ ಎಂದರು.

ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳ ಜೀವನ ದರ್ಶನ ಕೃತಿಯನ್ನು ಬಿಡುಗಡೆ ಮಾಡಿದ ತೇರದಾಳ ಕ್ಷೇತ್ರದ ಶಾಸಕ ಸಿದ್ಧು ಸವದಿ ಅವರು ಮಾತನಾಡಿ, ವೀರಶೈವ ಪೀಠಾಚಾರ್ಯರು ಜನಮನದ ಉನ್ನತಿ ಸುಖ ಶಾಂತಿ ಬದುಕಿಗೆ ಅಮೂಲ್ಯ ಕೊಡುಗೆ ಕೊಟ್ಟಿದ್ದಾರೆ. ರಂಭಾಪುರಿ ಪೀಠದ ನವ ನಿರ್ಮಾಣ ಶಿಲ್ಪಿ ಎಂದು ಪ್ರಖ್ಯಾತರಾದ ಶ್ರೀ ಶಿವಾನಂದ ಜಗದ್ಗುರುಗಳ ಜೀವನದ ಸಿದ್ದಿ ಸಾಧನೆಗಳು ಬದುಕಿ ಬಾಳುವ ಜನಾಂಗಕ್ಕೆ ಆಶಾಕಿರಣ ಎಂದರು. ಶ್ರೀ ಜಗದ್ಗುರು ಪಂಚ ಪೀಠಗಳಿಗೆ ತನ್ನದೇ ಆದ ಪರಂಪರೆ ಮತ್ತು ಇತಿಹಾಸವಿದೆ ಎಂದರು.ಪೀಠಾಚಾರ್ಯರು ಜನಮನದ ಉನ್ನತಿ ಸುಖ ಶಾಂತಿ ಬದುಕಿಗೆ ಅಮೂಲ್ಯ ಕೊಡುಗೆ ಕೊಟ್ಟಿದ್ದಾರೆ. ರಂಭಾಪುರಿ ಪೀಠದ ನವ ನಿರ್ಮಾಣ ಶಿಲ್ಪಿ ಎಂದು ಪ್ರಖ್ಯಾತರಾದ ಶ್ರೀ ಶಿವಾನಂದ ಜಗದ್ಗುರುಗಳ ಜೀವನದ ಸಿದ್ದಿ ಸಾಧನೆಗಳು ಬದುಕಿ ಬಾಳುವ ಜನಾಂಗಕ್ಕೆ ಆಶಾಕಿರಣ ಎಂದರು.

ಅಮ್ಮಿನಭಾವಿ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ವೀರಶೈವ ಧರ್ಮದ ಪ್ರಾಚೀನತೆ ಮತ್ತು ಪಂಚ ಪೀಠಗಳ ಪರಂಪರೆ ಕುರಿತು ಸವಿಸ್ತಾರವಾಗಿ ಮಾತನಾಡಿದ ಅವರು ಶಿವ ಭಕ್ತಿ ಗುರು ಪರಂಪರೆ ಇಷ್ಟಲಿಂಗ ಆರಾಧನೆ ಆಧ್ಯಾತ್ಮಿಕ ಸಾಧನೆ ಮತ್ತು ಮಾನವೀಯ ಮೌಲ್ಯಗಳಿಗೆ ಮಹತ್ವ ಕೊಟ್ಟಿರುವುದನ್ನು ಉಲ್ಲೇಖಿಸಿದರು.ಸಂಸ್ಕೃತಿಯ ಸಂರಕ್ಷಣೆ ಮತ್ತು ಸಮಾಜ ಸೇವೆ ಮೂಲ ಗುರಿಯಾಗಿದ್ದನ್ನು ಮರೆಯಲಾಗದು. ಪ್ರತಿಯೊಬ್ಬರು ಗುರುಪರಂಪರೆ ಅರಿತು ಆಚರಿಸಿ ಬಾಳಿದಾಗ ಉಜ್ವಲವಾದ ಬದುಕು ನಿರ್ಮಾಣಗೊಳ್ಳುವುದರಲ್ಲಿ ಸಂದೇಹವಿಲ್ಲ ಎಂದರು.

ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ವೀರಶೈವ ಧರ್ಮದ ಪಂಚಪೀಠಗಳು ಆಧ್ಯಾತ್ಮಿಕ ಮಾರ್ಗದರ್ಶನದ ಕೇಂದ್ರಗಳಾಗಿವೆ. ಧರ್ಮವು ಕೇವಲ ಆಚರಣೆಯಲ್ಲಿ ಉಳಿಯದೆ ನಮ್ಮ ನಡೆ ನುಡಿ ಮತ್ತು ಸಮಾಜ ಸೇವೆಯಲ್ಲಿ ಬೆಳೆದುಕೊಂಡು ಬರುವ ಅವಶ್ಯಕತೆ ಇದೆ. ಧರ್ಮ ಪ್ರಚಾರ ಧಾರ್ಮಿಕ ಶಿಕ್ಷಣ ಸಮಾಜ ಸೇವೆ ಸಂಸ್ಕೃತಿ ಸಂವರ್ಧನೆ ಮತ್ತು ನೈತಿಕ ಮೌಲ್ಯಗಳನ್ನು ಅನುಸರಿಸಿಕೊಂಡು ಬಾಳಬೇಕೆಂದು ಬಯಸಿದರು.ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಕಲ್ಯಾಣ ಹಿರೇಮಠ ಗಿರಿಸಾಗರ ಸಮ್ಮುಖ ವಹಿಸಿದ್ದರು. ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಬಿಲ್ವಾಶ್ರಮ ಹಿರೇಮಠ ಬಿಲ್‍ಕೆರೂರು ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಸಕರಾದ ನಾಡೋಜ ಜಗದೀಶ ಶಿವಯ್ಯ ಗುಡಗುಂಟಿ ಇವರು ಉಪಸ್ಥಿತರಿದ್ದರು. ಅತಿಥಿಗಳಾಗಿ ಮಲ್ಲು ಹೋಳಗಿ, ರಂಗನಾಥ ಸೋನ್ವಾಲ್ಕರ, ರವೀಂದ್ರ ಗವಳಿ, ಚಂದ್ರಕಾಂತ ಗವಳಿ, ಉಮೇಶ ಜಾಧವ ಪಾಲ್ಗೊಂಡಿದ್ದರು. ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಹಿರೇಪಡಸಲಗಿ, ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಮುತ್ತತ್ತಿ, ಪ್ರಮೀಳಾತಾಯಿ, ಜಗದೀಶ್ವರ ವಿರಕ್ತಮಠ, ಕಡಪಟ್ಟಿ, ಮೃತ್ಯುಂಜಯ ರುಮಾಲೆ ಹೊಸಪೇಟೆ, ಜಮಖಂಡಿಯ ಶಿವಪುತ್ರಯ್ಯ ಸಿದ್ದಗಿರಿಮಠ, ಶ್ರೀಮತಿ ರಾಜೇಶ್ವರಿ ಹಿರೇಮಠ, ಅರುಣಕುಮಾರ ಶಹಾ, ಅಶೋಕ ಗಾಂವಿ, ಹಾಗೂ ಮಹಾದೇವ ಇಟ್ಟಿ ಕಡಪಟ್ಟಿ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.ಡಾ. ಶಾರದಾ ಮುಳ್ಳುರ ಇವರು ಸರ್ವರನ್ನು ಸ್ವಾಗತಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಗಾನಭೂಷಣ ಶ್ರೀ ವೀರೇಶ ಕಿತ್ತೂರ ಗದಗ ಇವರಿಂದ ಸಂಗೀತ, ಶಿವಮೊಗ್ಗದ ಶಾಂತಾ ಆನಂದ ಇವರಿಂದ ನಿರೂಪಣೆ ನಡೆದವು.

Leave a Reply

Your email address will not be published. Required fields are marked *

↑
Suddi Belaku