ಸೇವಾ ಕಾರ್ಯದಿಂದಲೇ ಹಿರಿಯರಿಗೆ ನಿಜವಾದ ಗೌರವ: ಹೆಡಗಿಮದ್ರಾ ಶ್ರೀ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಹಿರಿಯರ ಭಾವಚಿತ್ರಕ್ಕೆ ಪುಷ್ಪಮಾಲೆ ಹಾಕಿ, ನೈವೇದ್ಯ ಸಮರ್ಪಿಸುವುದಕ್ಕಿಂತ ಸಮಾಜಕ್ಕೆ ಉಪಯೋಗವಾಗುವ ಸೇವಾ ಕಾರ್ಯಗಳ ಮೂಲಕ ಅವರನ್ನು ಸ್ಮರಿಸುವುದೇ ಅರ್ಥಪೂರ್ಣ ಎಂದು ಹೆಡಗಿಮದ್ರಾ ಶಾಂತಶಿವಯೋಗಿ ಮಠದ ಪೀಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಯಾದಗಿರಿ ನಗರದ ಶ್ರೀ ರಾಚನಗೌಡ ಮುದ್ನಾಳ ಅವರ ಮನೆಯ ಮುಂಭಾಗದಲ್ಲಿ ಶುಕ್ರವಾರ ಆಯೋಜಿಸಿದ್ದ ಲಿಂಗೈಕ್ಯರ ಪುಣ್ಯಸ್ಮರಣೋತ್ಸವ ಹಾಗೂ ಉಚಿತ ನೇತ್ರ ತಪಾಸಣೆ, ಚಿಕಿತ್ಸೆ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಲಿಂಗೈಕ್ಯ ಶ್ರೀ ಸೋಮನಾಥರೆಡ್ಡಿಗೌಡ ಶಿವರಾಯ ಯಲ್ಹೇರಿ, ಲಿಂಗೈಕ್ಯ ಶ್ರೀಮತಿ ಶಂಕರಲಿಂಗಮ್ಮ ಸೋಮನಾಥರೆಡ್ಡಿಗೌಡ ಯಲ್ಹೇರಿ, ಲಿಂಗೈಕ್ಯ ಡಾ. ವೀರಬಸವಂರೆಡ್ಡಿಗೌಡ ಮುದ್ನಾಳ ಹಾಗೂ ಲಿಂಗೈಕ್ಯ ಶ್ರೀ ವೆಂಕಟರೆಡ್ಡಿಗೌಡ ಮುದ್ನಾಳ ಇವರ ಸ್ಮರಣಾರ್ಥ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

“ಜನಸೇವೆಯೇ ಜನಾರ್ಧನ ಸೇವೆ. ಹಿರಿಯರು ನಡೆದು ತೋರಿಸಿದ ಆದರ್ಶದ ಹಾದಿಯಲ್ಲಿ ನಾವು ನಡೆದು, ಸಮಾಜಮುಖಿ ಕೆಲಸ ಮಾಡುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ” ಎಂದು ಸ್ವಾಮೀಜಿ ಹೇಳಿದರು.

ಕಾರ್ಯಕ್ರಮದಲ್ಲಿ ಆಗಮಿಸಿದ ಫಲಾನುಭವಿಗಳಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಲಾಯಿತು. ವೈದ್ಯರ ಪರೀಕ್ಷೆಯ ನಂತರ ಶಸ್ತ್ರಚಿಕಿತ್ಸೆಯ ಅಗತ್ಯವಿರುವವರನ್ನು ಗುರುತಿಸಿ ನೋಂದಣಿ ಮಾಡಿಕೊಳ್ಳಲಾಯಿತು. ದೃಷ್ಟಿದೋಷವಿರುವ ಅರ್ಹ ಫಲಾನುಭವಿಗಳಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು.

ಈ ಸಮಾಜಮುಖಿ ಸೇವಾ ಕಾರ್ಯಕ್ರಮಕ್ಕೆ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಜನರು ಆಗಮಿಸಿ ಪ್ರಯೋಜನ ಪಡೆದರು. ಫಲಾನುಭವಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ, ಖ್ಯಾತ ನೇತ್ರತಜ್ಞ ಡಾ. ಪ್ರದೀಪ್ ರೆಡ್ಡಿ, ಡಾ. ಶರಣಗೌಡ ಯಲ್ಹೇರಿ, ಡಾ. ವಿವೇಕಾನಂದರೆಡ್ಡಿ ಯಲ್ಹೇರಿ, ಭೀಮಣ್ಣಗೌಡ ಕ್ಯಾತ್ನಾಳ, ಶಂಕರ ಸೋನರ್ ಸೇರಿದಂತೆ ಮುಖಂಡರು, ಕಾರ್ಯಕರ್ತರು ಮತ್ತು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku