ಗುರಸುಣಗಿ ದೇವಸ್ಥಾನಕ್ಕೆ ತೆರಳಿದ್ದ ಭಕ್ತರ ಮೇಲೆ ಹಲ್ಲೆ: ಆರೋಪಿಗಳ ಬಂಧನಕ್ಕೆ ಆಗ್ರಹ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ವಡಗೇರಾ ತಾಲೂಕಿನ ಗುರಸುಣಗಿ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ಚಾಮನಹಳ್ಳಿ ಗ್ರಾಮದ ಭಕ್ತರ ಮೇಲೆ ಯುವಕರ ಗುಂಪೊಂದು ಜಾತಿ ನಿಂದನೆ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಖಂಡನೀಯ ಎಂದು ಎಂಆರ್‌ಎಚ್‌ಎಸ್ ರಾಜ್ಯ ಅಧ್ಯಕ್ಷ ಶಿವರಾಜ ಅಕ್ಕರಕಿ ಹೇಳಿದರು.

ಹಲ್ಲೆಗೊಳಗಾಗಿ ಯಾದಗಿರಿ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತರನ್ನು ಭೇಟಿ ಮಾಡಿದ ಅವರು, ಆರೋಗ್ಯ ವಿಚಾರಿಸಿ ಘಟನೆ ಕುರಿತು ಮಾಹಿತಿ ಪಡೆದುಕೊಂಡರು. ಸಂತ್ರಸ್ತರಿಗೆ ಧೈರ್ಯ ತುಂಬಿದ ಅವರು, ‘ನಿಮ್ಮೊಂದಿಗೆ ಇಡೀ ಮಾತಂಗ ಸಮುದಾಯ ಇದೆ. ಯಾವುದೇ ಕಾರಣಕ್ಕೂ ಅಂಜಬೇಡಿ. ಸರ್ಕಾರದಿಂದ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ಕೊಡಿಸಲು ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.

ಹಲ್ಲೆಗೊಳಗಾದವರು ಪರಿಶಿಷ್ಟ ಜಾತಿಯ ಮಾದಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಘಟನೆ ನಡೆದು ನಾಲ್ಕು ದಿನಗಳಾದರೂ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸದಿರುವುದು ಸರಿಯಲ್ಲ. ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ, ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಮನವಿ ಮಾಡಲಾಗಿದೆ. ಉಳಿದ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಆರೋಪಿಗಳ ಬಂಧನಕ್ಕೆ ವಿಳಂಬ ಮಾಡಿದರೆ ಸಂಘಟನೆಯ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದು, ಸಂತ್ರಸ್ತರಿಗೆ ನ್ಯಾಯ ದೊರಕಿಸುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಡಿಎಸ್‌ಎಸ್ ಸಂಚಾಲಕ ಬೂದೆಪ್ಪ ಕ್ಯಾದಿಗಿ, ಎಂಆರ್‌ಎಚ್‌ಎಸ್ ತಾಲೂಕು ಅಧ್ಯಕ್ಷ ಅರ್ಜುನ್ ಕೊಪ್ಪರ್, ಯಾದಗಿರಿ ಜಿಲ್ಲಾ ಎಂಆರ್‌ಎಚ್‌ಎಸ್ ಕಾರ್ಯದರ್ಶಿ ಮಲ್ಲು ಹಲಗಿ, ವಡಗೇರಾ ತಾಲೂಕು ಅಧ್ಯಕ್ಷ ಕುಮಾರ್ ತುಮಕೂರು, ತಾಲೂಕು ಅಧ್ಯಕ್ಷ ಶಂಕ್ರಪ್ಪ ಗೂಗಲ್, ಶರಣಪ್ಪ ಗೂಗಲ್, ಬಸಪ್ಪ ಮಾಲಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

You Might Also Like

Leave a Reply

Your email address will not be published. Required fields are marked *

Suddi Belaku