ಗುರುಸುಣಗಿ ಹಲ್ಲೆ ಪ್ರಕರಣ: ಅ.1ರಂದು ವಡಗೇರಾ ಬಂದ್ ಎಚ್ಚರಿಕೆ

Posted by

–

ಸುದ್ದಿ ಬೆಳಕು ವಾರ್ತೆ

ವಡಗೇರಾ : ಗುರುಸುಣಗಿ ಬೆಟ್ಟದ ದೇವಸ್ಥಾನದ ಆವರಣದಲ್ಲಿ ದಲಿತರ ಮೇಲೆ ನಡೆದಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ಅಕ್ಟೋಬರ್‌ 1ರಂದು ವಡಗೇರಾ ತಾಲೂಕು ಬಂದ್‌ ನಡೆಸಲಾಗುವುದು ಎಂದು ಮಾದಿಗ ದಂಡೋರ (MRPS) ಯಾದಗಿರಿ ಜಿಲ್ಲಾ ಸಮಿತಿ ಅಧ್ಯಕ್ಷ ಕಾಶಪ್ಪ ಮಾದಿಗ ಹೆಗ್ಗಣಗೆರಾ ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ಸೆ.27ರಂದು ನಡೆದ ಮಾದಿಗ ದಂಡೋರ (MRPS) ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗುರುಸುಣಗಿ ಬೆಟ್ಟದ ದೇವಸ್ಥಾನದ ಆವರಣದಲ್ಲಿ ದಲಿತರ ಮೇಲೆ ನಡೆದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದರು.

ದೇವಸ್ಥಾನಕ್ಕೆ ಆಗಮಿಸುವ ಸಾರ್ವಜನಿಕರು ಹಾಗೂ ಭಕ್ತಾದಿಗಳ ನಡುವೆ ಇಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆಯು ಸೂಕ್ತ ಭದ್ರತೆ ಮತ್ತು ಪೊಲೀಸ್ ಬಂದೋಬಸ್ತ್‌ ಒದಗಿಸಬೇಕು. ತಾಲೂಕಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಶೀಘ್ರ ಬಂಧಿಸಿ, ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು. ಅದರ ಭಾಗವಾಗಿ ಅ.1ರಂದು ವಡಗೇರಾ ತಾಲೂಕು ಬಂದ್‌ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಬಂದ್‌ ಹಾಗೂ ಮುಂದಿನ ಹೋರಾಟಕ್ಕೆ ಜಿಲ್ಲೆಯ ವಿವಿಧ ಭಾಗಗಳ ಸಮಾಜದ ಹಿರಿಯ ಮುಖಂಡರು, MRPS ಕಾರ್ಯಕರ್ತರು, ಬುದ್ಧಿಜೀವಿಗಳು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬೆಂಬಲಿಸಬೇಕು ಎಂದು ಕಾಶಪ್ಪ ಮಾದಿಗ ಮನವಿ ಮಾಡಿದರು.

Leave a Reply

Your email address will not be published. Required fields are marked *

↑
Suddi Belaku