
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮಸ್ವೀ ಗುರುವೇ ನಮಃ.
ಗುರು ಎಂದರೆ ಕೇವಲ ಪಾಠ ಹೇಳುವ ವ್ಯಕ್ತಿಯಲ್ಲ, ಬದುಕಿನ ದಾರಿಯನ್ನು ತೋರಿಸುವ ದಿವ್ಯ ಶಕ್ತಿ. ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕನ್ನು ನೀಡುವವರು ಗುರು. ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ದೇವರಷ್ಟೇ ಶ್ರೇಷ್ಠ ಸ್ಥಾನವನ್ನು ನೀಡಲಾಗಿದೆ ಎಂದು ದಾಸಬಾಳಾದೀಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ವೀರೇಶ್ವರ ಶ್ರೀಗಳು ಹೇಳಿದರು.

ಅವರು ನಗರದ ಸದ್ಗುರು ಶ್ರೀ ದಾಸಬಾಳದೀಶ್ವರ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗುರು ಪೂರ್ಣಿಮೆಯ ಈ ಪವಿತ್ರ ಸಂದರ್ಭದಲ್ಲಿ ಆಗಮಿಸಿದ ಭಕ್ತರನ್ನುದ್ಧೇಶಿಸಿ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಗುರುಗಳನ್ನು ಸ್ಮರಿಸಿ ಅವರ ಆಶೀರ್ವಾದ ಪಡೆಯಬೇಕು. ಗುರುಗಳ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ವ್ಯಕ್ತಿತ್ವ ವಿಕಸನ, ಉತ್ತಮ ಸಂಸ್ಕಾರ ಹಾಗೂ ಸಮಾಜದ ಉನ್ನತಿ ಸಾಧ್ಯವಾಗುತ್ತದೆ ಎಂದರು.

ಸತ್ಯ, ಧರ್ಮ, ಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಪಾಲಿಸುವ ಮೂಲಕ ಗುರುಗಳಿಗೆ ನಿಜವಾದ ಗೌರವ ಸಲ್ಲಿಸೋಣ. ಎಲ್ಲರ ಜೀವನದಲ್ಲಿ ಜ್ಞಾನ, ಶಾಂತಿ ಮತ್ತು ಸೌಹಾರ್ದ ನೆಲೆಸಲಿ ಎಂದು ಗುರು ಪೂರ್ಣಿಮೆಗೆ ಶುಭ ಹಾರೈಸಿದರು.
ಅಂದು ಶ್ರೀ ಮಠದಲ್ಲಿ ಬೆಳಿಗ್ಗೆಯಿಂದ ನಡೆದ ಧಾರ್ಮಿಕ ಪೂಜಾ ಕಾರ್ಯಕ್ರಮಗಳಲ್ಲಿ ಬಿಲ್ಪ ಪುಷ್ಪಾರ್ಚನೆ, ಲಕ್ಷ ಜಪಯಜ್ಞ ಹೋಮ, ಪಂಚಮುಖಿ ಹನುಮಾನ್ ದೇವರಿಗೆ ಕ್ಷೀರಾಭಿಷೇಕ, ಎಲಿ ಪೂಜೆ , ಪವಮಾನ ಹೋಮ, ಶಂಕ್ರಮ್ಮ ದೇವಿಗೆ ಕುಂಕುಮಾರ್ಚನೆ, ಉಡಿ ತುಂಬುವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.
ಕಡಲಿಗರ ಹುಣ್ಣಿಮೆಯ ಪ್ರಯುಕ್ತ ನಡೆದ ಈ ಕಾರ್ಯಕ್ರಮಕ್ಕೆ ಯಾದಗಿರಿ ನಗರದ ಮತ್ತು ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನ ಭಕ್ತರು ಆಗಮಿಸಿ, ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.











Leave a Reply