ದೋರನಹಳ್ಳಿ ಹಾಲು ಸಂಸ್ಕರಣಾ ಕೇಂದ್ರ ಪುನರ್ ಪ್ರಾರಂಭಿಸಲು ಕರವೇ ಒತ್ತಾಯ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ರಾಜ್ಯ ಸರ್ಕಾರ ಮೈಸೂರು ಭಾಗಕ್ಕೆ ಹೆಚ್ಚಿನ ಒತ್ತುಕೊಟ್ಟು ಹಾಲು ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಿದಂತೆ ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡುತ್ತಿಲ್ಲವಾದ್ದರಿಂದ ಈ ಭಾಗದಲ್ಲಿ ರೈತರಿಗೆ ಅನ್ಯಾಯವಾಗುತ್ತಿದ್ದು, ಕೂಡಲೇ ಯಾದಗಿರಿ ಜಿಲ್ಲೆಯ ದೋರನಹಳ್ಳಿ ಹಾಲು ಸಂಸ್ಕರಣಾ ಕೇಂದ್ರವನ್ನು ಪುನರ್ ಪ್ರಾರಂಭಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಟಿ.ಎನ್.ಭೀಮುನಾಯಕ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೋರನಹಳ್ಳಿ ಹಾಲು ಸಂಸ್ಕರಣಾ ಕೇಂದ್ರ ಪುನರ್ ಪ್ರಾರಂಭಿಸುವುದರ ಜೊತೆಗೆ ರೈತರಿಗೆ ಹಾಲು ಮಾರಾಟ ಮಾಡಲು ಪ್ರತಿ ಹಳ್ಳಿಗಳಲ್ಲಿ ಹಾಲು ಖರೀದಿ ಕೇಂದ್ರಗಳನ್ನು ಪ್ರಾರಂಭೀಸಬೇಕು, ಅದರ ಜೊತೆಗೆ ಸದ್ಯ ಬರಗಾಲ ಘೋಷಣೆ ಮಾಡಿದ್ದು ರೈತರು ಸಂಕಷ್ಟದಲ್ಲಿದ್ದಾರೆ ಸಂಕಷ್ಟದಲ್ಲಿರುವ ರೈತರನ್ನು ಬಲಿಷ್ಟಗೊಳಿಸಲು ತಲಾ ರೈತರಿಗೆ ಎರಡು ಹಸುಗಳನ್ನು ಸರ್ಕಾರದ ವತಿಯಿಂದ ನೀಡಬೇಕು ಎಂದು ಆಗ್ರಹಿಸಿದರು.
ಕಲಬುರಗಿ ಬೀದರ್ ಹಾಲು ಒಕ್ಕೂಟದಿಂದ ಪ್ರತಿ ಹಳ್ಳಿಗಳಲ್ಲಿ (ಕೆಎಂಎಫ್ ಮಳಿಗೆ)ಹಾಲು ಮಾರಾಟ ಕೇಂದ್ರಗಳ ಪ್ರಾಂಚೈಸಿ ಪ್ರಾರಂಭಿಸಿ ರೈತರ ಮಕ್ಕಳಿಗೆ ಸರ್ಕಾರದ ಸಹಾಯಧನದಲ್ಲಿ ನೀಡಬೇಕು ಇದರಿಂದ ಹಾಲು ಉತ್ಪನ್ನಗಳು ಪ್ರತಿಹಳ್ಳಿಗಳಲ್ಲಿ ಮಾರಾಟವಾಗುವುದಲ್ಲದೆ ರೈತರ ಮಕ್ಕಳಿಗೆ ಉದ್ಯೋಗ ಕೊಟ್ಟಂತಾಗುತ್ತದೆ ಎಂದು ಹೇಳಿದ್ದಾರೆ.
ಸರ್ಕಾರ ರೈತರ ಸಹಾಯಕ್ಕೆ ಬರಲು ಇದು ಸೂಕ್ತಕಾಲವಾಗಿದ್ದು ಉತ್ತರ ಕರ್ನಾಟಕದ ರೈತರಿಗೆ ವಿಶೇಷವಾಗಿ ಸಂಪೂರ್ಣ ಬರಪೀಡಿತ ಯಾದಗಿರಿ ಜಿಲ್ಲೆಗೆ ವಿಶೇಷ ಆದ್ಯತೆ ನೀಡಿ ರೈತರ ಸಹಾಯಕ್ಕೆ ಬರಬೇಕು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲೆಯ ನಾಲ್ಕು ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಕರವೇ ತಾಲೂಕು ಅಧ್ಯಕ್ಷರಾದ ಮಲ್ಲು ಮಾಳಿಕೇರಿ, ಜಿಲ್ಲಾ ಪ್ರಧಾನಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಶ ಹತ್ತಿಮನಿ, ಅಬ್ದುಲ್ ಚಿಗಾನೂರ, ನಿಂಗಪ್ಪ ಗುಡಗುಡಿ, ಚೌಡಯ್ಯ ಬಾವೂರ, ಹಣಮಂತ ತೇಕರಾಳ, ಭೀಮರಾಯ ರಾಮಸಮುದ್ರ, ಅಂಬ್ರೇಶ ಕಟ್ಟಿಮನಿ, ಮಲ್ಲಿಕಾರ್ಜುನ ದೋರನಹಳ್ಳಿ, ಕಾಶೀನಾಥ ನಾನೇಕ, ಅಶೋಕ ನಾಯಕ, ಬಸವರಾಜ ಜಗನ್ನಾಥ, ಸಿದ್ದಪ್ಪ ಕ್ಯಾಸಪನಳ್ಳಿ, ಸಿದ್ದಪ್ಪ ಕೂಯಿಲೂರುಮ, ಮರೆಪ್ಪ ಕಡ್ಡಿ, ರಮೇಶ ನಾಯಕ ಆಗ್ರಹಿಸಿದ್ದಾರೆ.


ಹಳ್ಳಿಗಳಲ್ಲಿ ಸರ್ಕಾರದಿಂದ ಕೋ ಆಪರೇಟಿವ್ ಸುಸೈಟಿಗಳಿಂದ ರೈತರಿಗೆ ನೇರವಾಗಿ ಸಾಲ ಸೌಲಭ್ಯ ನೀಡಬೇಕು, ರೈತರಿಗೆ ಅನುಕೂಲವಾಗಲು ಹಾಗೂ ಜನರ ಗುಳೆ ತಪ್ಪಿಸಲು ಜನಪ್ರತಿನಿಧಿಗಳು ಇಚ್ಚಾಸಕ್ತಿ ಧೋರಣೆಯಿಂದ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ತರಬೇಕು ಸಂಪೂರ್ಣ ಬರಪೀಡಿತ ಯಾದಗಿರಿ ಜಿಲ್ಲೆಯನ್ನು ಉಳಿಸಲು ಕ್ರಮಕೈಗೊಳ್ಳಬೇಕಾಗಿದೆ.
– ಟಿ.ಎನ್.ಭೀಮುನಾಯಕ ಕರವೇ ಜಿಲ್ಲಾಧ್ಯಕ್ಷರು ಯಾದಗಿರಿ

Leave a Reply

Your email address will not be published. Required fields are marked *

↑
Suddi Belaku