ಸುದ್ದಿ ಬೆಳಕು ವಾರ್ತೆ
ಶಹಾಪುರ : ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟ ಹಿನ್ನೆಲೆಯಲ್ಲಿ ತೇವಾಂಶದ ಕೊರತೆಯಿಂದ ಹತ್ತಿ ಗಿಡಗಳು ಬೆಳವಣಿಗೆ ಕಾಣದೆ ಒಣಗಿ ಹೋದ ಪರಿಣಾಮ, ಕಂಗಾಲಾದ ರೈತರೊಬ್ಬರು ತಾವು ಸಾಲ-ಸೋಲ ಮಾಡಿ ಬೆಳೆದಿದ್ದ ಬರೋಬ್ಬರಿ 7 ಎಕರೆ ಹತ್ತಿ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ಸಂಪೂರ್ಣ ನಾಶಪಡಿಸಿದ ಮನಕಲಕುವ ಘಟನೆ ಸಮೀಪದ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ದೋರನಹಳ್ಳಿ ಪಟ್ಟಣದ ರೈತ ಕಾಳಪ್ಪ ಪತ್ತಾರ ಅವರು ಗ್ರಾಮದ ಸರ್ವೆ ನಂ. 44/01 ರಲ್ಲಿರುವ ತಮ್ಮ 7 ಎಕರೆ ಜಮೀನಿನಲ್ಲಿ ಉತ್ತಮ ಇಳುವರಿಯ ನಿರೀಕ್ಷೆಯೊಂದಿಗೆ ಹತ್ತಿ ಬೆಳೆದಿದ್ದರು. ಆದರೆ ಈ ಬಾರಿ ಮುಂಗಾರು ಆರಂಭದಿಂದಲೂ ಮಳೆ ಕಣ್ಣಾಮುಚ್ಚಾಲೆ ಆಡಿದ್ದರಿಂದ ರೈತ ಕಾಳಪ್ಪ ಅವರು ಮಳೆ ಬರುವ ಆಸೆಯಿಂದ ಒಂದೇ ಹಂಗಾಮಿನಲ್ಲಿ ಬರೋಬ್ಬರಿ ಮೂರು ಬಾರಿ ಹತ್ತಿ ಬಿತ್ತನೆ ಮಾಡಿದ್ದಾರೆ.
ಮೊದಲ ಬಾರಿ ಬಿತ್ತಿದಾಗ ಮಳೆಯಾಗದೆ ಬೀಜಗಳು ಸಮರ್ಪಕವಾಗಿ ಮೊಳಕೆಯೊಡೆಯಲಿಲ್ಲ. ನಂತರ ಎರಡನೇ ಬಾರಿ ಬಿತ್ತನೆ ಮಾಡಿದರೂ ಮಳೆ ಕೈಕೊಟ್ಟಿತು. ಆದರೂ ಧೃತಿಗೆಡದೆ ಮೂರನೇ ಬಾರಿಯೂ ಬಿತ್ತನೆ ಮಾಡಿ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟರು. ಆದರೆ ಮೂರನೇ ಬಿತ್ತನೆಯ ನಂತರವೂ ವರುಣ ಕೃಪೆ ತೋರಲಿಲ್ಲ. ತೇವಾಂಶದ ತೀವ್ರ ಕೊರತೆಯಿಂದಾಗಿ ಗಿಡಗಳು ಎತ್ತರಕ್ಕೆ ಬೆಳೆಯದೆ ಕುಂಠಿತಗೊಂಡು, ಹೂ-ಕಾಯಿ ಬಿಡುವ ಮುನ್ನವೇ ನೆಲದಲ್ಲೇ ಒಣಗಿ ನಿಂತವು.

ಹೆಚ್ಚಿದ ಆರ್ಥಿಕ ಹೊರೆ – ಅನಿವಾರ್ಯ ಉಳುಮೆ:
ಮೂರು ಬಾರಿ ಬಿತ್ತನೆ ಮಾಡಿದ ಪರಿಣಾಮ ದುಬಾರಿ ಬೆಲೆಯ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ, ಕಳೆ ಕೀಳುವಿಕೆ, ಕೂಲಿ ಹಾಗೂ ಟ್ರ್ಯಾಕ್ಟರ್ ಬಾಡಿಗೆ ಸೇರಿ ಲಕ್ಷಾಂತರ ರೂಪಾಯಿ ಸಾಲದ ಹೊರೆ ರೈತನ ಹೆಗಲೇರಿದೆ. ಹೊಲದಲ್ಲಿ ಒಣಗಿ ನಿಂತ ಗಿಡಗಳಿಂದ ನಯಾಪೈಸೆ ಆದಾಯ ಬರುವ ಲಕ್ಷಣ ಕಾಣಿಸದ ಕಾರಣ, ಬೇರೆ ದಾರಿಯಿಲ್ಲದೆ ರೈತ ಕಾಳಪ್ಪ ಪತ್ತಾರ ಅವರು ಸ್ವತಃ ತಾವೇ ಟ್ರ್ಯಾಕ್ಟರ್ ಮೂಲಕ 7 ಎಕರೆ ಹತ್ತಿ ಬೆಳೆಯನ್ನು ಉಳುಮೆ ಮಾಡಿ ನಾಶಪಡಿಸಿದ್ದಾರೆ. ರಕ್ತ ಸುರಿಸಿ ಬೆಳೆದ ಬೆಳೆ ಕಣ್ಣೆದುರೇ ಧೂಳೀಪಟವಾಗುತ್ತಿರುವುದನ್ನು ಕಂಡು ಅನ್ನದಾತ ಕಣ್ಣೀರು ಹಾಕಿದ್ದಾರೆ.
ತಕ್ಷಣವೇ ಜಂಟಿ ಸಮೀಕ್ಷೆ ನಡೆಸಿ:
ಕೃಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಬೆಳೆ ನಷ್ಟದ ವಾಸ್ತವ ಸಮೀಕ್ಷೆ ನಡೆಸಬೇಕು. ರೈತರ ಸಂಕಷ್ಟಕ್ಕೆ ಸ್ಪಂದಿಸಿ ಶೀಘ್ರವೇ ಪರಿಹಾರ ಮತ್ತು ಬೆಳೆ ವಿಮೆ ಸೌಲಭ್ಯ ಒದಗಿಸಬೇಕು ಎಂದು ಸ್ಥಳೀಯ ರೈತರು ಆಗ್ರಹಿಸಿದ್ದಾರೆ.
“ಮಳೆ ಕೊರತೆಯಿಂದ ಸರ್ವಸ್ವವನ್ನೂ ಕಳೆದುಕೊಂಡಿರುವ ನಮಗೆ ಸರ್ಕಾರ ಪ್ರತಿ ಎಕರೆಗೆ ಕನಿಷ್ಠ ₹50 ಸಾವಿರ ಪರಿಹಾರ ನೀಡಬೇಕು. ರೈತರ ಎಲ್ಲಾ ಕೃಷಿ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಸರ್ಕಾರ ಕೂಡಲೇ ಅಧಿಕಾರಿಗಳ ಮೂಲಕ ಬೆಳೆ ಹಾನಿ ಸಮೀಕ್ಷೆ ನಡೆಸಿ ರೈತರ ನೆರವಿಗೆ ಧಾವಿಸಬೇಕು.”
— ಕಾಳಪ್ಪ ಪತ್ತಾರ, ನೊಂದ ರೈತ, ದೋರನಹಳ್ಳಿ













Leave a Reply