ಯಾದಗಿರಿಯಲ್ಲಿ ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Posted by

ಯಾದಗಿರಿ : ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಭಾರತ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ್ ವಿಭೂತಿಹಳ್ಳಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವು ಎಲ್ಲ ವರ್ಗಗಳಿಗೂ ಸಮಾನ ಅವಕಾಶಗಳನ್ನು ಒದಗಿಸಿರುವ ಮಹತ್ವದ ದಸ್ತಾವೇಜು ಎಂದರು. ಸಮಾಜದ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅವರ ಚಿಂತನೆಗಳು ಇಂದಿಗೂ ಮಾರ್ಗದರ್ಶಕವಾಗಿವೆ. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಅವರ ತತ್ವಗಳು ಸಮಾಜ ಪರಿವರ್ತನೆಗೆ ದಾರಿದೀಪವಾಗಿವೆ ಎಂದು ಹೇಳಿದರು.

ಅಂಬೇಡ್ಕರ್ ಅವರು ಸಮಾನತೆ ಹಾಗೂ ಸಾಮಾಜಿಕ ನ್ಯಾಯ ಸ್ಥಾಪನೆಗಾಗಿ ಜೀವನಪೂರ್ತಿ ಶ್ರಮಿಸಿದ ಮಹಾನ್ ನಾಯಕರು. ದೇಶದ ಪ್ರಗತಿಗೆ ಅವರ ಕೊಡುಗೆ ಅಪಾರವಾಗಿದೆ. ಸಂವಿಧಾನದ ಮೂಲಕ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ಒದಗಿಸಿದ್ದಾರೆ ಎಂದು ಹೇಳಿದರು.

ಯುವಜನತೆ ಅಂಬೇಡ್ಕರ್ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸಮಾಜದ ದುರ್ಬಲ ವರ್ಗಗಳ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ ರಾಜ್ಯ ಮಾಜಿ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ ಮಾತನಾಡಿ, ಅಂಬೇಡ್ಕರ್ ಅವರು ಮಹಿಳೆಯರ ಹಕ್ಕುಗಳು ಹಾಗೂ ಸಬಲೀಕರಣಕ್ಕಾಗಿ ಹೋರಾಡಿದ ಮಹಾನ್ ನಾಯಕರು. ಮಹಿಳೆಯರಿಗೆ ಶಿಕ್ಷಣ, ಸಮಾನ ಅವಕಾಶ ಮತ್ತು ಗೌರವಯುತ ಜೀವನ ದೊರಕಬೇಕೆಂಬುದು ಅವರ ಕನಸಾಗಿತ್ತು ಎಂದು ಹೇಳಿದರು.

ಮಹಿಳೆಯರು ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಅಂಬೇಡ್ಕರ್ ಅವರ ಚಿಂತನೆಯ ಫಲವಾಗಿದೆ. ಮಹಿಳೆಯರು ಆತ್ಮವಿಶ್ವಾಸದಿಂದ ಮುಂದೆ ಬಂದು ಸಮಾಜ ನಿರ್ಮಾಣದಲ್ಲಿ ಸಕ್ರಿಯ ಪಾತ್ರವಹಿಸಬೇಕು ಎಂದು ಕರೆ ನೀಡಿದರು.

ಜಿ.ಪಂ. ಮಾಜಿ ಸದಸ್ಯ ಖಂಡಪ್ಪ ದಾಸನಕೇರಿ ಮಾತನಾಡಿ, ಅಂಬೇಡ್ಕರ್ ಅವರ ಸಂವಿಧಾನ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಿದ್ದು, ಸಮಾನತೆ ಮತ್ತು ಸಹೋದರತ್ವವನ್ನು ಬೆಳೆಸಲು ನೆರವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Suddi Belaku