ಭಾರತ್ ಜೋಡೊ ಯುವ ಸಂಘ ರಚನೆಗಾಗಿ ಅರ್ಜಿ ಆಹ್ವಾನ : ಶರಣಪ್ಪ ಮಡಿವಾಳ  

Posted by

–

ಸುದ್ದಿ ಬೆಳಕು ವಾರ್ತೆ

ಗುರುಮಠಕಲ್: ಪುರಸಭೆ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆದೇಶದಂತೆ ‘ಭಾರತ್ ಜೋಡೋ’ ಯುವ ಸಂಘಗಳನ್ನು ಸ್ಥಾಪಿಸಿ ನೋಂದಾಯಿಸಲು ಆಸಕ್ತ 16ರಿಂದ 35 ವರ್ಷದೊಳಗಿನ ಯುವಕ-ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಗುರುಮಠಕಲ್ ಪುರಸಭೆ ವ್ಯಾಪ್ತಿಯಲ್ಲಿ ಸರಾಸರಿ 6 ಸಾವಿರ ಜನಸಂಖ್ಯೆಗೆ ಒಂದರಂತೆ ಒಟ್ಟು 4 ‘ಭಾರತ್ ಜೋಡೋ’ ಯುವ ಸಂಘಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ. ಪುರಸಭೆ ವ್ಯಾಪ್ತಿಯ ಸ್ಥಳೀಯ ನಿವಾಸಿಗಳಾಗಿರುವ 16ರಿಂದ 35 ವರ್ಷದೊಳಗಿನ ಯುವಕ-ಯುವತಿಯರು ಸಂಘದ ಸದಸ್ಯರಾಗಲು ಅರ್ಹರಾಗಿರುತ್ತಾರೆ.
ಆಸಕ್ತರು ಬಿಜಿವೈಎಸ್ ಪೋರ್ಟಲ್ ಅಥವಾ ಮೊಬೈಲ್ ಆ್ಯಪ್ ಮೂಲಕ ಹಾಗೂ ಸಮೀಪದ ಕರ್ನಾಟಕ ಒನ್ ಮತ್ತು ನಾಗರಿಕ ಸೇವಾ ಕೇಂದ್ರಗಳ ಸಹಾಯದಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನೋಂದಣಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಪ್ರತಿ ಸದಸ್ಯರಿಗೆ ₹10 ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ಒಬ್ಬ ಯುವಕ ಅಥವಾ ಯುವತಿ ಒಂದೇ ‘ಭಾರತ್ ಜೋಡೋ’ ಯುವ ಸಂಘದ ಸದಸ್ಯರಾಗಲು ಅವಕಾಶವಿದೆ.
ಯುವಕರಲ್ಲಿ ಸಂಘಟನಾ ಮನೋಭಾವ ಬೆಳೆಸುವುದು, ಕ್ರೀಡೆ, ಕೌಶಲ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವುದು ಮತ್ತು ಸಮುದಾಯದ ಅಭಿವೃದ್ಧಿಯಲ್ಲಿ ಯುವಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಸಂಘಗಳ ಪ್ರಮುಖ ಉದ್ದೇಶವಾಗಿದೆ.
ಯುವಶಕ್ತಿಗೆ ವೇದಿಕೆ: ತಳಮಟ್ಟದ ಸಾಮಾಜಿಕ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಯುವಕರ ಪಾಲ್ಗೊಳ್ಳುವಿಕೆಗೆ ‘ಭಾರತ್ ಜೋಡೋ’ ಯುವ ಸಂಘಗಳು ವೇದಿಕೆಯಾಗಲಿವೆ. ಯುವಕರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳನ್ನು ಸಂಘಗಳ ಮೂಲಕ ಹಮ್ಮಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಆಸಕ್ತ ಯುವಕ-ಯುವತಿಯರು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಗುರುಮಠಕಲ್ ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

↑
Suddi Belaku