ಕಾಲುವೆಗಳಿಗೆ ತಕ್ಷಣ ನೀರು ಹರಿಸಿ: ಸರ್ಕಾರಕ್ಕೆ ಮಾಗನೂರ ಆಗ್ರಹ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ನಾರಾಯಣಪುರ (ಬಸವಸಾಗರ) ಜಲಾಶಯದಿಂದ ಕೃಷ್ಣಾ ನದಿಗೆ ಸಾವಿರಾರು ಕ್ಯೂಸೆಕ್ ನೀರು ಹರಿಸುತ್ತಿರುವ ಸರ್ಕಾರ, ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಗಳಿಗೂ ಕೂಡಲೇ ನೀರು ಹರಿಸಿ ರೈತರ ಬೆಳೆಗಳನ್ನು ಉಳಿಸಬೇಕು ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದ ಕಾರಣ ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಸಂಕಷ್ಟದಲ್ಲಿದ್ದು, ಈಗಾಗಲೇ ಸುಮಾರು ಶೇ.50ರಷ್ಟು ಬೆಳೆ ಹಾನಿಯಾಗಿದೆ. ಉಳಿದಿರುವ ಶೇ.50ರಷ್ಟು ಬೆಳೆ ಉಳಿಸಬೇಕಾದರೆ ಕೂಡಲೇ ಕಾಲುವೆಗಳಿಗೆ ನೀರು ಹರಿಸುವುದು ಅನಿವಾರ್ಯ ಎಂದು ಒತ್ತಾಯಿಸಿದ್ದಾರೆ.
ರೈತರು ಸಾಲ ಮಾಡಿ ಬೀಜ, ಗೊಬ್ಬರ ಹಾಗೂ ಔಷಧ ಖರೀದಿಸಿ ಬೆಳೆ ಬೆಳೆದಿದ್ದಾರೆ. ನೀರಿನ ಕೊರತೆಯಿಂದ ಬೆಳೆಗಳು ಒಣಗುತ್ತಿವೆ. ಈಗಾಗಲೇ ಕೃಷ್ಣಾ ನದಿಗೆ ನೀರು ಹರಿಸುತ್ತಿದ್ದೀರಿ. ಅದೇ ರೀತಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಗಳಿಗೂ ನೀರು ಹರಿಸಿದರೆ ಮಾತ್ರ ಉಳಿದಿರುವ ಬೆಳೆಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ, ಎಂದು ಅವರು ಹೇಳಿದ್ದಾರೆ.
ಈಗ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದ್ದು, ಡ್ಯಾಂ ಬಹುತೇಕ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದೆ. ಹೀಗಾಗಿ ನೀರಿನ ಲಭ್ಯತೆಗೆ ಯಾವುದೇ ಕೊರತೆಯಿಲ್ಲ. ಆದ್ದರಿಂದ ಸರ್ಕಾರ ಯಾವುದೇ ವಿಳಂಬ ಮಾಡದೆ ನೀರಾವರಿ ಸಲಹಾ ಸಮಿತಿ ಸಭೆ ಕರೆದು, ರೈತರ ಹಿತದೃಷ್ಟಿಯಿಂದ ತಕ್ಷಣ ಕಾಲುವೆಗಳಿಗೆ ನೀರು ಹರಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೃಷ್ಣಾ ನದಿಗೆ ನೀರು ಹರಿಸುವುದಷ್ಟೇ ಅಲ್ಲ, ಕೃಷಿ ಚಟುವಟಿಕೆಗಳಿಗೂ ಆದ್ಯತೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕಾಲುವೆಗಳಿಗೆ ನೀರು ಹರಿಸುವಲ್ಲಿ ಮತ್ತಷ್ಟು ವಿಳಂಬವಾದರೆ ಉಳಿದಿರುವ ಬೆಳೆಗಳೂ ಸಂಪೂರ್ಣ ಹಾನಿಗೊಳಗಾಗಲಿದ್ದು, ಅದರ ಸಂಪೂರ್ಣ ಹೊಣೆ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಮೇಲಿದೆ ಎಂದು ಚಂದ್ರಶೇಖರಗೌಡ ಮಾಗನೂರ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

Suddi Belaku