ಯಾದಗಿರಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಕ್ರಮ – ಟ್ಯಾಂಕರ್ ಮೂಲಕ ಪೂರೈಕೆ: ಪೌರಾಯುಕ್ತ ಚವ್ಹಾಣ

Posted by

ಯಾದಗಿರಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಕ್ರಮ – ಟ್ಯಾಂಕರ್ ಮೂಲಕ ಪೂರೈಕೆ: ಪೌರಾಯುಕ್ತ ಚವ್ಹಾಣ

ಯಾದಗಿರಿ: ಬೇಸಿಗೆ ಆರಂಭವಾಗುತ್ತಿದ್ದಂತೆ ನಗರದಲ್ಲಿನ ಹಲವು ವಾರ್ಡಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು, ಅದನ್ನು ನಿವಾರಿಸಲು ನಗರಸಭೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಪೌರಾಯುಕ್ತ ಉಮೇಶ ಚವ್ಹಾಣ ತಿಳಿಸಿದ್ದಾರೆ.
ನಗರಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೀಮಾ ನದಿಯಿಂದ ಶುದ್ಧ ಕುಡಿಯುವ ನೀರು ಪೂರೈಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ಜನರ ಬೇಡಿಕೆಯಂತೆ ಈಗಾಗಲೇ 318 ಹೊಸ ಬೊರವೆಲ್‌ಗಳನ್ನು ಅಳವಡಿಸಲಾಗಿದ್ದು, ಪ್ರತಿದಿನ 3 ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದಲ್ಲದೆ, ಅಗತ್ಯವಿದ್ದಲ್ಲಿ 15 ಖಾಸಗಿ ಟ್ಯಾಂಕರ್ ಮಾಲೀಕರ ಸೇವೆಯನ್ನು ಬಳಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ತೆರಿಗೆ ಪಾವತಿಗೆ ಮನವಿ
ನಗರದಲ್ಲಿ ವಾಸಿಸುವ ನಾಗರಿಕರು ಮತ್ತು ವ್ಯಾಪಾರಸ್ಥರಿಂದ ಸಂಗ್ರಹಿಸಬೇಕಾದ ಸುಮಾರು ₹10 ಕೋಟಿ ತೆರಿಗೆಯಲ್ಲಿ ಇದುವರೆಗೆ ₹5 ಕೋಟಿ ಮಾತ್ರ ವಸೂಲಾಗಿದೆ. ಈ ಹಣವನ್ನು ಪೌರಕಾರ್ಮಿಕರ ಸಂಬಳ, ಸ್ವಚ್ಚತೆ, ವಾಹನ ನಿರ್ವಹಣೆ, ಕುಡಿಯುವ ನೀರು ಪೂರೈಕೆ ಹಾಗೂ ಗುತ್ತಿಗೆ ನೌಕರರ ವೇತನಕ್ಕೆ ಬಳಸಲಾಗುತ್ತಿದೆ.
ಹೀಗಾಗಿ, ಜನರು ತಮ್ಮ ಆಸ್ತಿ ತೆರಿಗೆಗಳನ್ನು ಸಕಾಲದಲ್ಲಿ ಪಾವತಿಸಿದರೆ ಮೂಲಭೂತ ಸೌಕರ್ಯಗಳನ್ನು ಉತ್ತಮವಾಗಿ ಒದಗಿಸಲು ಸಹಾಯವಾಗುತ್ತದೆ ಎಂದು ಪೌರಾಯುಕ್ತರು ಮನವಿ ಮಾಡಿದರು.
ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ
ಬಿಸಿಲು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ನಗರಸಭೆಯಿಂದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಹಳೆ ನ್ಯಾಯಾಲಯದ ಮುಂದೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

Leave a Reply

Your email address will not be published. Required fields are marked *

Suddi Belaku