
ಸುದ್ದಿ ಬೆಳಕು ವಾರ್ತೆ
ಯಾದಗಿರಿ: ಜಿಲ್ಲೆಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಆರಂಭವಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಮನೆ-ಮನೆಗೆ ಭೇಟಿ ನೀಡುವ ಬಿಎಲ್‍ಒ.ಗಳ ಕಾರ್ಯವು ಜಿಲ್ಲೆಯಲ್ಲಿ ಚುರುಕಿನಿಂದ ಸಾಗುತ್ತಿದೆ.
ಮತದಾರರಿಗೆ ಎಣಿಕೆ ನಮೂನೆ (Enumeration Form – EF) ವಿತರಿಸುವ ಸಲುವಾಗಿ ಬಿಎಲ್‍ಒಗಳು ಕಳೆದ ಜೂನ್ 30 ರಿಂದಲೇ ಮನೆ-ಮನೆ ಭೇಟಿಯನ್ನು ಆರಂಭಿಸಿದ್ದಾರೆ. ಈ ಪ್ರಕ್ರಿಯೆಯು ಜುಲೈ 29 ರವರೆಗೆ ಮುಂದುವರಿಯಲಿದ್ದು, ಎಣಿಕೆ ನಮೂನೆ ನೀಡುವುದು ಹಾಗೂ ಡಿಜಿಟೈಸೇಷನ್ ಕಾರ್ಯಗಳು ಪ್ರಗತಿಯಲ್ಲಿವೆ.
ಜೂನ್ 16 ರ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಒಟ್ಟು 10,53,236 ಮತದಾರರು ದಾಖಲಾಗಿದ್ದಾರೆ. ಜಿಲ್ಲೆಯಲ್ಲಿ ಶೇ. 100 ರಷ್ಟು ಅಂದರೆ ಎಲ್ಲಾ 10,53,236 ಎಣಿಕೆ ನಮೂನೆಗಳನ್ನು (ಇಎಫ್) ಈಗಾಗಲೇ ವಿತರಿಸಲಾಗಿದೆ. ಒಟ್ಟು ವಿತರಿಸಲಾದ ನಮೂನೆಗಳ ಪೈಕಿ 2,42,862 (ಶೇ. 23.06) ನಮೂನೆಗಳನ್ನು ಡಿಜಿಟೈಸ್ ಮಾಡಲಾಗಿದೆ. ಇದರಲ್ಲಿ 1,793 ನಮೂನೆಗಳನ್ನು ಆನ್‍ಲೈನ್ ಮೂಲಕ ಸ್ವೀಕರಿಸಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು ಶೇ. 97.08 ರಷ್ಟು ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದೆ.
ತಾಲೂಕುವಾರು ಡಿಜಿಟೈಸೇಷನ್ ಪ್ರಗತಿ ವಿವರ: ಶಹಾಪುರ ಶೇ. 30.39 (ಅತಿ ಹೆಚ್ಚು ಪ್ರಗತಿ), ಗುರಮಿಟಕಲ್ ಶೇ. 27.69, ಹುಣಸಗಿ ಶೇ. 26.13, ವಡಗೇರಾ ಶೇ. 19.28, ಶೋರಾಪೂರ ಶೇ. 18.59, ಯಾದಗಿರಿ ಶೇ. 16.89
ಮನೆ-ಮನೆ ಸಮೀಕ್ಷೆಯ ಸಂದರ್ಭದಲ್ಲಿ ಬಿಎಲ್‍ಒಗಳು ಒಟ್ಟು 3,427 ವಿಶೇಷ ಪ್ರಕರಣಗಳನ್ನು ಗುರುತಿಸಿದ್ದಾರೆ. ಅದರಲ್ಲಿ ಮೃತ ಮತದಾರರು 1,523, ಶಾಶ್ವತವಾಗಿ ಸ್ಥಳಾಂತರಗೊಂಡವರು 1,240, ಈಗಾಗಲೇ ನೊಂದಾಯಿತರಾಗಿರುವವರು 593, ಗೈರು ಹಾಜರಾದ ಮತದಾರರು 54, ಇತರ ಪ್ರಕರಣಗಳು 17 ಇರುತ್ತಾರೆ.
ಈ ವಿಶೇಷ ಪರಿಷ್ಕರಣಾ ಕಾರ್ಯದ ಮೂಲಕ ಜಿಲ್ಲೆಯಲ್ಲಿ ಅರ್ಹ ಮತದಾರರ ನಿಖರ ಪಟ್ಟಿಯನ್ನು ಸಿದ್ಧಪಡಿಸಲು ಜಿಲ್ಲಾಡಳಿತವು ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಶ್ರೀ ರಾಹುಲ್ ತುಕಾರಾಮ ಪಾಂಡ್ವೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Leave a Reply