ಸೆ.27ಕ್ಕೆ ವಾಲ್ಮೀಕಿ ನಾಯಕ ಮಹಾಸಭಾದ ಪ್ರತಿಭಾ ಪುರಸ್ಕಾರ ಹಾಗೂ ವಿಶೇಷ ಸನ್ಮಾನ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಯುವ ಘಟಕದ ವತಿಯಿಂದ 2025–26ನೇ ಸಾಲಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳು, ಆದರ್ಶ ಶಿಕ್ಷಕರು, ಸಮಾಜ ಸೇವಕರು, ಪತ್ರಕರ್ತರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ ಸೆ.27ರಂದು ಪ್ರತಿಭಾ ಪುರಸ್ಕಾರ ಹಾಗೂ ವಿಶೇಷ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ನರಸಪ್ಪ ನಾಯಕ ಬುಡಾಯಿನೋರ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತ ಮೂರನೇ ವರ್ಷವೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, 2025–26ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ 85ಕ್ಕಿಂತ ಹೆಚ್ಚು ಅಂಕ ಗಳಿಸಿದ ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಗುವುದು. ಕಾರ್ಯಕ್ರಮವು ಯಾದಗಿರಿಯ ಶ್ರೀ ವಾಲ್ಮೀಕಿ ಭವನದಲ್ಲಿ ನಡೆಯಲಿದೆ ಎಂದರು.

ಶೈಕ್ಷಣಿಕ ಸಾಧಕರ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಜದ 150ಕ್ಕೂ ಹೆಚ್ಚು ಸಾಧಕರನ್ನು ಗುರುತಿಸಿ ಸನ್ಮಾನಿಸುವ ಉದ್ದೇಶ ಹೊಂದಲಾಗಿದೆ. ಸಮಾಜದ ಹಿರಿಯರನ್ನು ಗೌರವಿಸುವ ಜತೆಗೆ ವಿವಿಧ ಸಮುದಾಯಗಳ ಸಾಮಾಜಿಕ ಹೋರಾಟಗಾರರನ್ನೂ ಗುರುತಿಸಿ ಸನ್ಮಾನಿಸಲಾಗುವುದು ಎಂದು ಹೇಳಿದರು.

ಸುರಪುರ, ಶಹಾಪುರ, ಹುಣಸಗಿ ಹಾಗೂ ವಡಗೇರಾ ತಾಲ್ಲೂಕುಗಳಿಂದ ತಲಾ ಒಬ್ಬ ಆದರ್ಶ ಶಿಕ್ಷಕ ಹಾಗೂ ಒಬ್ಬ ಸಮಾಜ ಸೇವಕರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಯಾದಗಿರಿ ಜಿಲ್ಲೆಯಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಐವರು ಪತ್ರಕರ್ತರನ್ನು ಆಯ್ಕೆ ಮಾಡಿ ‘ಉತ್ತಮ ಪತ್ರಕರ್ತ ಪ್ರಶಸ್ತಿ’ ನೀಡಿ ಸನ್ಮಾನಿಸಲಾಗುವುದು. ಪೊಲೀಸ್ ಇಲಾಖೆಯಲ್ಲಿ ಸಮಾಜಮುಖಿ ಸೇವೆ ಸಲ್ಲಿಸಿರುವ ಐವರು ಸಿಬ್ಬಂದಿಯನ್ನೂ ಗುರುತಿಸಿ ಗೌರವಿಸಲಾಗುವುದು ಎಂದರು.

ಕಾರ್ಯಕ್ರಮಕ್ಕೆ ರಾಜನಹಳ್ಳಿ ಗುರು ಪ್ರಸನ್ನಾನಂದಪುರಿ ಮಹಾಸ್ವಾಮೀಜಿ ಆಗಮಿಸಲಿದ್ದು, ಕನ್ನಡ ಚಲನಚಿತ್ರ ನಿರ್ದೇಶಕ ಹಾಗೂ ನಟ ರಾಧಾಕೃಷ್ಣ ಪಲ್ಲಕ್ಕಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಮಾಜಿ ದೇವದುರ್ಗ ಶಾಸಕ ಕೆ. ಶಿವನಗೌಡ ನಾಯಕ ಹಾಗೂ ಮಾಜಿ ಸುರಪುರ ಶಾಸಕ ರಾಜುಗೌಡ ಅವರ ಸಹೋದರರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನರಸಪ್ಪ ನಾಯಕ ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನೂ ಆಯೋಜಿಸಲಾಗಿದೆ. ಸಮಾಜದ ವಿದ್ಯಾರ್ಥಿಗಳು, ಸಾಧಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಸಲಿಂಗನಾಯಕ ನಗರ ಘಟಕದ ಅಧ್ಯಕ್ಷ, ಸಾಬಣ್ಣ ಪರಸನಾಯಕ, ಮಂಜುನಾಥ ಅಬ್ಬೇತುಮಕೂರ, ನಾಗರಾಜ ಮೇಟಿ ಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


ಯುವ ಪ್ರತಿಭೆಗಳಿಗೆ ಪ್ರೋತ್ಸಾಹ

ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಜತೆಗೆ ಸಮಾಜದ ಒಳಿತಿಗಾಗಿ ದುಡಿಯುತ್ತಿರುವವರನ್ನು ಗೌರವಿಸುವುದು ಮಹಾಸಭೆಯ ಆಶಯವಾಗಿದೆ. ಈ ಬಾರಿ ಕಾರ್ಯಕ್ರಮವನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಯೋಜಿಸಲಾಗುತ್ತಿದೆ. ಶಿಕ್ಷಣ, ಸಾಮಾಜಿಕ ಸೇವೆ, ಪತ್ರಿಕೋದ್ಯಮ ಹಾಗೂ ಪೊಲೀಸ್ ಇಲಾಖೆಯಲ್ಲಿ ಗಮನಾರ್ಹ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

— ನರಸಪ್ಪ ನಾಯಕ ಬುಡಾಯಿನೋರ
ಜಿಲ್ಲಾಧ್ಯಕ್ಷ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ, ಯಾದಗಿರಿ

Leave a Reply

Your email address will not be published. Required fields are marked *

↑
Suddi Belaku