ಯಾದಗಿರಿಯಲ್ಲಿ ಟಿಪ್ಪರ್ ಮಾಲೀಕರ ಪ್ರತಿಭಟನೆ: ಶಾಸಕ ಶರಣಗೌಡ ಕಂದಕೂರ ಹೇಳಿಕೆಗೆ ಖಂಡನೆ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಟಿಪ್ಪರ್‌ಗಳಿಗೆ ಬೆಂಕಿ ಹಚ್ಚುವುದಾಗಿ ಶಾಸಕ ಶರಣಗೌಡ ಕಂದಕೂರ ನೀಡಿರುವ ಹೇಳಿಕೆ ಖಂಡಿಸಿ ಸೋಮವಾರ ನಗರದಲ್ಲಿ ಟಿಪ್ಪರ್ ಮಾಲಿಕರ ಸಂಘದಿಂದ  ನಡೆದ ಪ್ರತಿಭಟನೆಗೆ ಕಾಂಗ್ರೆಸ್ ಮುಖಂಡ ಶರಣಪ್ಪ ಮಾನೆಗಾರ್ ಧ್ವನಿಗೂಡಿಸಿ, ಶಾಸಕರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ನಗರದ ಗಂಜ್ ಪ್ರದೇಶದಿಂದ 200ಕ್ಕೂ ಅಧಿಕ ಟಿಪ್ಪರ್‌ಗಳೊಂದಿಗೆ ಮೆರವಣಿಗೆ ನಡೆಸಿದ ಸಂಘದ ಪದಾಧಿಕಾರಿಗಳು, ಸುಭಾಷ್ ವೃತ್ತದಲ್ಲಿ ಜಮಾಯಿಸಿದ  ಶಾಸಕ ಶರಣಗೌಡ ಕಂದಕೂರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು

ಪ್ರತಿಭಟನೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಶರಣಪ್ಪ ಮಾನೆಗಾರ್, ಟಿಪ್ಪರ್ ಮಾಲೀಕರು ಶೋಕಿಗಾಗಿ ವಾಹನಗಳನ್ನು ಖರೀದಿಸಿಲ್ಲ, ಕುಟುಂಬ ನಿರ್ವಹಣೆಗಾಗಿ ಸಾಲ ಮಾಡಿ ವಾಹನಗಳನ್ನು ಖರೀದಿಸಿದ್ದಾರೆ ಎಂದು ತಿರುಗೇಟು ನೀಡಿದರು.

 ಶಾಸಕರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದರು.

ಯಾವುದೇ ಅಕ್ರಮ ಚಟುವಟಿಕೆ ಕಂಡುಬಂದರೆ ಅಧಿಕಾರಿಗಳು ಕಾನೂನು ಪ್ರಕಾರ ಪರಿಶೀಲನೆ ನಡೆಸಲಿ. ಆದರೆ, ಕಾನೂನು ಬದ್ಧವಾಗಿ ಜೀವನ ನಡೆಸುತ್ತಿರುವವರನ್ನು ಬೆದರಿಸುವುದು ಸರಿಯಲ್ಲ. ನಮ್ಮ ಚಟುವಟಿಕೆಗಳ ಮೇಲೆ ಅಧಿಕಾರಿಗಳು ನಿಗಾ ಇಡುವಂತೆ, ಕಾನೂನು ಉಲ್ಲಂಘನೆಗಳಿದ್ದರೆ ಅವುಗಳ ಮೇಲೂ ನಿಗಾ ಇರಲಿ ಎಂದು ಹೇಳಿದರು.

ಟಿಪ್ಪರ್ ಮಾಲೀಕರು ತಮ್ಮ ಕುಟುಂಬಗಳನ್ನು ನಿರ್ವಹಿಸಲು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಹಾಗೂ ಗೌರವಯುತ ಜೀವನ ನಡೆಸಲು ವಾಹನಗಳನ್ನು ಖರೀದಿಸಿದ್ದಾರೆ. ಶಾಸಕರಂತೆ ಐಷಾರಾಮಿ ಜೀವನಕ್ಕಾಗಿ ಯಾರೂ ಟಿಪ್ಪರ್‌ಗಳನ್ನು ಇಟ್ಟಿಲ್ಲ. ಮಳೆ, ಬಿಸಿಲು, ಚಳಿ ಎನ್ನದೆ ವಾಹನಗಳನ್ನು ಓಡಿಸಿ ದುಡಿಯುತ್ತಾರೆಂದರು.

ಟಿಪ್ಪರ್‌ಗಳಿಂದಲೇ ರಸ್ತೆಗಳು ಹಾಳಾಗುತ್ತಿವೆ ಎಂಬ ಆರೋಪಗಳ ಕುರಿತು ಮಾತನಾಡಿದ ಅವರು, ರಸ್ತೆ ಕಾಮಗಾರಿಗಳ ಗುಣಮಟ್ಟ, ಗುತ್ತಿಗೆದಾರರ ಜವಾಬ್ದಾರಿ ಹಾಗೂ ಕಾಮಗಾರಿಗಳಲ್ಲಿನ ಭ್ರಷ್ಟಾಚಾರದ ಆರೋಪಗಳ ಬಗ್ಗೆಯೂ ಪರಿಶೀಲನೆ ನಡೆಯಬೇಕು ಎಂದು ಒತ್ತಾಯಿಸಿದರು. ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣವಾದರೆ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ. ಎಲ್ಲ ಸಮಸ್ಯೆಗಳಿಗೂ ಟಿಪ್ಪರ್‌ಗಳನ್ನೇ ಹೊಣೆ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ವಾಹನಗಳಿಗೆ ಬೆಂಕಿ ಹಚ್ಚುವ ಮಾತುಗಳನ್ನು ಬಿಟ್ಟು ಕಾನೂನು ಪ್ರಕಾರ ನಡೆದುಕೊಳ್ಳಬೇಕು. ಯಾವುದೇ ತಪ್ಪು ಕಂಡುಬಂದರೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಲಿ ಎಂದು ಸವಾಲಿನ ಧಾಟಿಯಲ್ಲಿ ಮಾತನಾಡಿದರು.

ಜನಪ್ರತಿನಿಧಿಗಳು ಐದು ವರ್ಷಕ್ಕೊಮ್ಮೆ ಮತದಾರರ ಬಳಿಗೆ ಬರಬೇಕಾಗುತ್ತದೆ. ಜನರ ಸಮಸ್ಯೆಗಳನ್ನು ಆಲಿಸಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸಾರ್ವಜನಿಕವಾಗಿ ಮಾತನಾಡುವಾಗ ಜನಪ್ರತಿನಿಧಿಗಳು ತಮ್ಮ ಮಾತುಗಳ ಪರಿಣಾಮವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ಅಹಿಂದ ರಾಜ್ಯ ಮುಖಂಡ ಹನುಮೇಗೌಡ ಬೀರನಕಲ್, ಉಮೇಶ ಮುದ್ದಾಳ, ತೇಜರಾಜ್ ರಾಠೋಡ್ ಇತರರು, ಶಾಸಕರ ಹೇಳಿಕೆ ಕುರಿತಂತೇ ಸಂಬಂಧಪಟ್ಟ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕೆಂದರು. ಟಿಪ್ಪರ್ ಮಾಲಿಕ, ಚಾಲಕರಿಗೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿ ವಿನಾಃ ಕಾರಣ ತೊಂದರೆ ನೀಡಬಾರದು. ಶಾಸಕರು ಕಾನೂನು ಮೀರಿ ವರ್ತಿಸುವುದು ನಿಲ್ಲಿಸಬೇಕೆಂದು ಆಗ್ರಹಿಸಿದರು. ಸುಮಾರು ಒಂದು ಕಿಲೋ ಮೀಟರವರೆಗೂ ನಡೆದ ಪ್ರತಿಭಟನೆಯಲ್ಲಿ ಅತಿ ಉತ್ಸಾಹದಿಂದ ಭಾಗವಹಿಸಿದ್ದ ನೂರಾರು ಜನರು ಬೇಡಿಕೆಗಳಿಗೆ ಆಗ್ರಹಿಸಿ ಘೋಷಣೆ ಕೂಗಿದರು. ಮೆರವಣಿಗೆ ಉದ್ದಕ್ಕೂ ಟಿಪ್ಪರ್ ಚಾಲಕರು ಒಂದೇ ಸವನೇ ಹಾರ್ನ್ ಭಾರಿಸುವ ಮೂಲಕ ರಸ್ತೆಯಲ್ಲಿ ಇದ್ದ ಸಾವಿರಾರು ಜನರಿಗೆ ಕಿರಿ,ಕಿರಿ ಅನುಭವಿಸಬಹುವಂತೆಯೇ ಮಾಡಿದರು. ಸುಮಾರು 3 ಗಂಟೆಗಳವರೆಗೆ ನಡೆದ ಪ್ರತಿಭಟನೆಯಿಂದಾಗಿ ಬಸ್‌ ಸೇರಿದಂತೆಯೇ ವಾಹನಗಳ ಮತ್ತು ಜನರ ಸಂಚಾರಕ್ಕೆ ತೊಂದರೆ ಉಂಟಾಯಿತು. ಸಂಘದ ಅಧ್ಯಕ್ಷ ರಘುಪತಿ, ಶಶಾಂಕ, ಪ್ರವಿಣಕುಮಾರ, ಮಲ್ಲು ಮಾಳಿಕೇರಿ, ಮಲ್ಲಯ್ಯ, ರವಿಕುಮಾರ, ಭೀಮರಾಯ ಬಂಕಲಗಿ, ಮಲ್ಲಣ್ಣ, ಎಂ.ಡಿ.ಶೋಫ್, ಪರಶುರಾಮ ನಾಯಕ, ಕಾಶಿನಾಥ ಸೇರಿದಂತೆಯೇ ಇತರರಿದ್ದರು.

ಸ್ಥಳಕ್ಕೆ ಆಗಮಿಸಿದ ಎಡಿಸಿ ರಮೇಶ ಕೋಲಾರ ಅವರಿಗೆ ಮನವಿ ಸಲ್ಲಿಸಿದರು.

Leave a Reply

Your email address will not be published. Required fields are marked *

↑
Suddi Belaku