ಯಾದಗಿರಿ ಜಿಲ್ಲೆಯ ಉಳಿದ 5 ತಾಲೂಕುಗಳ ಗ್ರೌಂಡ್ ಟ್ರೂಥಿಂಗ್‌ಗೆ ಸೇರ್ಪಡೆ: ಜೆಡಿಎಸ್ ಸ್ವಾಗತ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ರಾಜ್ಯ ಸರ್ಕಾರ ತನ್ನ ಬರ ಪೀಡಿತ ತಾಲೂಕಿನ ಮೂರನೇ ಪಟ್ಟಿಯಲ್ಲಿ ಯಾದಗಿರಿ ಜಿಲ್ಲೆಯ ಉಳಿದ 5 ತಾಲೂಕುಗಳನ್ನು ಗ್ರೌಂಡ್ ಟ್ರೂಥಿಂಗಿಗೇ ಸೇರ್ಪಡೆ ಮಾಡಿದ್ದು ನಮ್ಮ ಶಾಸಕ ಶರಣಗೌಡ ಕಂದಕೂರ ಅವರ ಹೋರಾಟಕ್ಕೆ ಸಂದ ಗೆಲುವಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಕಳೆದ ತಿಂಗಳು ರಾಜ್ಯ ಸರ್ಕಾರ ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕು ಮಾತ್ರ ಸೇರಿಸಿತ್ತು. ವಾಸ್ತವವಾಗಿ ಯಾದಗಿರಿ ಮತ್ತು ಗುರಮಠಕಲ್ ತಾಲೂಕುಗಳು ಹಿಂದೆಂದೂ ಕಾಣದಂಥ ಬರ ಪರಸ್ಥಿತಿ ಅನುಭವಿಸುತ್ತಿದ್ದು, ಈ ಬಗ್ಗೆ ನಮ್ಮ ಶಾಸಕರಾದ ಶರಣಗೌಡ ಕಂದಕೂರ ಅವರು ಸುದ್ದಿಗೋಷ್ಟಿ ನಡೆಸಿದ್ದಲ್ಲದೆ, ಬೆಂಗಳೂರಿನ ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಏಕಾಂಗಿಯಾಗಿ ಹೋರಾಟ ನಡೆಸುವ ಮೂಲಕ ಯಾದಗಿರಿ ಮತ್ತು ಗುರಮಠಕಲ್ ತಾಲೂಕುಗಳನ್ನು ಬರದ ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಸರ್ಕಾರಕ್ಕೆ ಒತ್ತಡ ಹೇರಿದ್ದರು. ಅಲ್ಲದೆ ‘ಕ್ರಾಪ್ ಲಾಸ್ ಜಿಟಿ’ ಆ್ಯಪ್ ಮೂಲಕ ತಕ್ಷಣವೇ ಬೆಳೆ ಹಾನಿ ಸಮೀಕ್ಷೆ (ಗ್ರೌಂಡ್ ಟ್ರೂಥಿಂಗ್) ನಡೆಸಿ ವರದಿ ಪಡೆದುಕೊಳ್ಳಲು ಆಗ್ರಹಿಸಿದ್ದರು.

ಶಾಸಕರ ಹೋರಾಟದಿಂದ ಎಚ್ಚೆತ್ತುಕೊಂಡ ಸರ್ಕಾರ ಕೊನೆಗೂ ಜಿಲ್ಲೆಯ ಯಾದಗಿರಿ, ಗುರಮಠಕಲ್, ಸುರಪುರ, ಹುಣಸಗಿ ಮತ್ತು ವಡಿಗೇರಾ ತಾಲೂಕುಗಳು ಸಹ ಬರಪೀಡಿತ ಪಟ್ಟಿಗೆ ಸೇರಿಸಲು
ಗ್ರೌಂಡ್ ಟ್ರೂಥಿಂಗ್ ವರದಿ ಮಾಡಲು ಆಯ್ಕೆ ಮಾಡಿರುವುದು ಸ್ವಾಗತಾರ್ಯ ಎಂದು ತಿಳಿಸಿರುವ ಕಟಕಟಿ, ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಬೆಳೆ ಸಮೀಕ್ಷೆ ಮತ್ತು ಬರದ ವಾಸ್ತವ ಸ್ಥಿತಿ ಅರಿಯಲು ಜಿಲ್ಲೆಗೆ ಭೇಟಿ ನೀಡಲಿದ್ದು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಅಲ್ಲದೆ, ಸರ್ಕಾರ ಸಧ್ಯ ಮಧ್ಯಮ ಬರಗಾಲ ಎಂದು ಘೋಷಿಸಿದ್ದು ಗುರಮಠಕಲ್ ತಾಲೂಕನ್ನು ತೀವ್ರ ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಗೆ ತೊಂದರೆಯಾಗದಂತೆ ಮೇವು ಬ್ಯಾಂಕ್ ಸ್ಥಾಪನೆ ಮಾಡಬೇಕು.‌ ಇನ್ನೂ ಕೇಂದ್ರ ಸರ್ಕಾರ ವಿಬಿಜಿ ರಾಮ್ ಜೀ ( ಉದ್ಯೋಗ ಖಾತ್ರಿ) ಯೋಜನೆಯಡಿ ರೈತಾಪಿ ವರ್ಗಕ್ಕೆ ಕೂಲಿ ಕೆಲಸ ತ್ವರಿತವಾಗಿ ಅನುಷ್ಠಾನಕ್ಕೆ ತರುವ ಮೂಲಕ ಕೈಗಳಿಗೆ ಕೆಲಸ ಕೊಡುವ ಮೂಲಕ ಯಾದಗಿರಿ ಜಿಲ್ಲೆ ಜನತೆ ಗುಳೆ ಹೋಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇನ್ನೂ ಕೃಷಿ ಅಧಿಕಾರಿಗಳು ಜಿಲ್ಲಾದ್ಯಂತ ಗ್ರಾಮೀಣ ಭಾಗದಲ್ಲಿ ಸಂಚರಿಸಿ ಗ್ರೌಂಡ್ ಟ್ರೂಥಿಂಗ್ ನಡಿ ಸರ್ಕಾರಕ್ಕೆ ನೈಜ ವರದಿ ಸಲ್ಲಿಸಬೇಕು. ಇದರ ಜತೆಯಲ್ಲಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಶೀಘ್ರದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

7 ಗಂಟೆ ನಿರಂತರ ವಿದ್ಯುತ್ ಕೊಡಿ

ರಾಜ್ಯ ಸರ್ಕಾರ ಈ ಹಿಂದೆ ರೈತರ ಬೆಳೆಗಳಿಗೆ 7 ಗಂಟೆ ವಿದ್ಯುತ್ ಸಂಪರ್ಕ ಕೊಡುತ್ತದೆ ಎಂದು ಭರವಸೆ ನೀಡಿತ್ತು. ಆದರೆ,ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಇರುವ 7 ಗಂಟೆಯಲ್ಲಿ ಅರ್ಧರ್ಧ ಘಂಟೆ ಕಟ್ ಮಾಡುತ್ತಿದೆ.‌ ಅಲ್ಲದೆ, ಇದೀಗ ಏಳು ಗಂಟೆ ಬದಲು ಆರೇ ಗಂಟೆ ವಿದ್ಯುತ್ ನೀಡುವುದಾಗಿ ಜೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ. ಸರ್ಕಾರ ತನ್ನ ಮಾತಿಗೆ ಬದ್ಧವಾಗಿದ್ದು ಸತತ 7 ಗಂಟೆ ವಿದ್ಯುತ್ ಕೊಡಲೇಬೇಕು ಎಂದು ಕಟಕಟಿ ಹೇಳಿಕೆಯಲ್ಲಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

Leave a Reply

Your email address will not be published. Required fields are marked *

↑
Suddi Belaku