
ಒಂದೇ ವಾರದಲ್ಲಿ ಚಟ್ಟಳ್ಳಿಯ ಇಬ್ಬರು ರೈತರ ಆತ್ಮಹತ್ಯೆ; ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಬರದ ನಡುವೆ ಸರ್ಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ ನಿಯೋಗ
ಸುದ್ದಿ ಬೆಳಕು ವಾರ್ತೆ
ಯಾದಗಿರಿ: ಮಳೆ ಇಲ್ಲದೇ ಜಿಲ್ಲೆಯ ರೈತರು ತೊಂದರೆಯಲ್ಲಿದ್ದು, ಸರ್ಕಾರ ಈ ಕೂಡಲೇ ಗಮನ ಹರಿಸಿ ಸೂಕ್ತ ಕ್ರಮ ಜರುಗಿಸಬೇಕು ಮತ್ತು ಜಿಲ್ಲೆಯ ಶಾಸಕರು ಮಂತ್ರಿ ಆಗುವ ಆಶೆ ಬಿಟ್ಟು ಹಳ್ಳಿಗಳಿಗೆ ಭೇಟಿ ನೀಡಿ ರೈತರ ಕಷ್ಟ ಕೇಳುವ ಮೂಲಕ ಇನ್ನಷ್ಟು ಆತ್ಮಹತ್ಯೆಗಳು ತಡೆಯಬೇಕೆಂದು ಮಾಜಿ ಸಚಿವ ರಾಜೂಗೌಡ ಆಗ್ರಹಿಸಿದರು.
ತಾಲೂಕಿನ ಚಟ್ಟಳ್ಳಿ ಗ್ರಾಮಕ್ಕೆ ಮಂಗಳವಾರ ಬಿಜೆಪಿ ಮುಖಂಡರ ನಿಯೋಗದೊಂದಿಗೆ ಭೇಟಿ ನೀಡಿದ ಅವರು ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡ ರೈತ ಮಲ್ಲಿಕಾರ್ಜುನ ಅವರ ಕುಟುಂಬಸ್ಥರನ್ನು ಭೇಟಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಒಂದೇ ವಾರದಲ್ಲಿ ಚಟ್ಟಳ್ಳಿ ಗ್ರಾಮದಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಒಂದುವರೆ ತಿಂಗಳಿಂದ ಮಳೆ ಇಲ್ಲ, ಬಿತ್ತಿದ ಬೆಳೆ ಬಹುತೇಕ ಒಣಗಿವೆ. ಆದರೂ ರಾಜ್ಯ ಸರ್ಕಾರಕ್ಕೆ ಕಿಂಚಿತ್ತು ಗಮನವಿಲ್ಲ. ಕೃಷಿ ಸಚಿವರೇ ಇಲ್ಲದ
ಡಿ.ಕೆ.ಶಿವಕುಮಾರ ನೇತೃತ್ವದ ಸಂಪುಟದ ಕೆಲವೇ ಸಚಿವರು ಬೇರೆ, ಬೇರೆ ವಿಚಾರಗಳಿಗೆ ಒತ್ತು ನೀಡುತ್ತಿದ್ದಾರೆ. ಆದರೇ ಅನ್ನದಾತನ ನೆರವಿಗೆ ಬರುತ್ತಿಲ್ಲ. ಕೂಡಲೇ ಸರ್ಕಾರ ಇತ್ತ ಚಿತ್ತ ಹರಿಸಬೇಕು. ನಿರ್ಲಕ್ಷ್ಯವಹಿಸಿದರೆ ಬಿಜೆಪಿ ಬೀದಿಗಿಳಿದು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಬಿಡದಿ ಟೌನ್ ಶಿಪ್ ರೈತರ ಮನವೊಲಿಸಿ ಮಾಡಬೇಕೇ ವಿನಾಃ ದಲ್ಲಾಳರಿಗೆ ಅನುಕೂಲವಾಗಲು ಮಾಡಬಾರದೆಂದು ರಾಜೂಗೌಡ ಹೇಳಿದರು.
ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ಅವರು ವೈಯಕ್ತಿಕವಾಗಿ 51 ಸಾವಿರ ರೂ.ಪರಿಹಾರವನ್ನು ಮೃತ ಮಲ್ಲಿಕಾರ್ಜುನ ಹೆಂಡತಿ, ಮಕ್ಕಳಿಗೆ ನೀಡಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಹೇಶರೆಡ್ಡಿ ಮುದ್ನಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರುಶುರಾಮ ಕುರಕುಂದಾ, ಬಿಜೆಪಿ ಯುವ ಘಟಕದ ಜಿಲ್ಲಾಧ್ಯಕ್ಷ ಶ್ರೀಧರ ಸಾಹುಕಾರ, ಭೀಮಣ್ಣಗೌಡ ಖ್ಯಾತನಾಳ, ಸಿದ್ದಣ್ಣಗೌಡ ಕಾಡಂನೊರ, ಡಾ.ಚಂದ್ರಶೇಖರ ಸುಬೇದಾರ, ವಿಜಯಕುಮಾರ ಸಾಹುಕಾರ, ಸುರೇಶ ಮಾಲಿಪಾಟೀಲ್, ಬಸವರಾಜ ಸೊನ್ನದ, ಸೋಮಯ್ಯ ಸ್ವಾಮಿ ಹಿರೇಮಠ, ಚಂದಪ್ಪ ಕಾವಲಿ, ರಾಜಶೇಖರ ಕಾಡಂನೂರ ಸೇರಿದಂತೆಯೇ ಇತರರಿದ್ದರು.











Leave a Reply