ಯಾದಗಿರಿ ದೇವಾಲಯಗಳಲ್ಲಿ ಸಿಸಿಟಿವಿ, UPI ಕಡ್ಡಾಯ; ಜಿಲ್ಲಾಧಿಕಾರಿ ಮಹತ್ವದ ಆದೇಶ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಧರ್ಮದತ್ತಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಹುಂಡಿ, ದೇಣಿಗೆ, ಚಿನ್ನ-ಬೆಳ್ಳಿ ವಸ್ತುಗಳ ಭದ್ರತೆ ಹಾಗೂ ಲೆಕ್ಕಪತ್ರ ನಿರ್ವಹಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಖಚಿತಪಡಿಸಿಕೊಳ್ಳಲು ಸರ್ಕಾರದ ಮಾರ್ಗಸೂಚಿಗಳನ್ನು (SOP) ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದ ವಿವಿಧ ರಾಜ್ಯಗಳಲ್ಲಿ ದೇವಾಲಯಗಳ ಹುಂಡಿ ಕಳ್ಳತನ ಹಾಗೂ ಹಣ ದುರುಪಯೋಗ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.

ಸಭೆಯಲ್ಲಿ ನೀಡಿದ ಪ್ರಮುಖ ಸೂಚನೆಗಳು:

  • ದೇವಾಲಯಗಳ ಸೂಕ್ತ ಸ್ಥಳಗಳಲ್ಲಿ ಭದ್ರತೆಯೊಂದಿಗೆ ಹುಂಡಿಗಳನ್ನು ಅಳವಡಿಸಬೇಕು.
  • ನಾಲ್ಕೂ ದಿಕ್ಕಿನಿಂದ ಗೋಚರಿಸುವಂತೆ ವೆಬ್ ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಿ, ದೃಶ್ಯಗಳನ್ನು ಸರ್ವರ್‌ನಲ್ಲಿ ಸಂಗ್ರಹಿಸಬೇಕು.
  • ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ಪೊಲೀಸ್ ಇಲಾಖೆಗೆ ಲೈವ್ ಸಿಸಿಟಿವಿ ಸಂಪರ್ಕ ಕಲ್ಪಿಸಬೇಕು.
  • ಹುಂಡಿ ದೇಣಿಗೆಗೆ ಯುಪಿಐ, ಭೀಮ್, ಕ್ಯೂಆರ್ ಕೋಡ್ ಸೇರಿದಂತೆ ಡಿಜಿಟಲ್ ಪಾವತಿ ವ್ಯವಸ್ಥೆ ಕಡ್ಡಾಯವಾಗಿ ಅಳವಡಿಸಬೇಕು.
  • ಡಿಜಿಟಲ್ ಪಾವತಿಯನ್ನು ದೇವಾಲಯದ ಲೆಕ್ಕಪತ್ರ ವ್ಯವಸ್ಥೆಯೊಂದಿಗೆ ಸಂಯೋಜಿಸಿ ಪಾರದರ್ಶಕತೆ ಹೆಚ್ಚಿಸಬೇಕು.
  • ಹುಂಡಿ ಎಣಿಕೆ ದಿನಾಂಕವನ್ನು ಮುಂಚಿತವಾಗಿ ನಿಗದಿಪಡಿಸಿ ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಬೇಕು.
  • ಹುಂಡಿ ತೆರೆಯುವ ಹಂತದಿಂದ ಬ್ಯಾಂಕ್‌ಗೆ ಹಣ ಹಸ್ತಾಂತರಿಸುವವರೆಗೆ ಸಂಪೂರ್ಣ ಪ್ರಕ್ರಿಯೆಯನ್ನು ದಿನಾಂಕ ಹಾಗೂ ಸಮಯ ದಾಖಲೆಯೊಂದಿಗೆ ವಿಡಿಯೊ ಚಿತ್ರೀಕರಿಸಬೇಕು.
  • ಹುಂಡಿ ಎಣಿಕೆಗೆ ಸಾರ್ವಜನಿಕರ ಬದಲು ಗೃಹರಕ್ಷಕ ದಳ, ಬ್ಯಾಂಕ್ ಸಿಬ್ಬಂದಿ ಅಥವಾ ಸರ್ಕಾರಿ ನೌಕರರ ಸೇವೆಯನ್ನಷ್ಟೇ ಬಳಸಬೇಕು.

ಜಿಲ್ಲಾ ಮಟ್ಟದ ಮೇಲ್ವಿಚಾರಣೆಗೆ ಸಮಿತಿ

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದ್ದು, ಇದರಲ್ಲಿ ಪೊಲೀಸ್ ವರಿಷ್ಠಾಧಿಕಾರಿ, ಮುಜರಾಯಿ ಇಲಾಖೆ, ಅಗ್ನಿಶಾಮಕ ಇಲಾಖೆ ಹಾಗೂ ಇತರೆ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಸಮಿತಿ ಪ್ರತಿ ತಿಂಗಳು ಸಭೆ ನಡೆಸಿ ಭದ್ರತೆ, ಅಗ್ನಿ ಸುರಕ್ಷತೆ, ಸಿಸಿಟಿವಿ ಕಾರ್ಯಕ್ಷಮತೆ ಹಾಗೂ ತುರ್ತು ಪ್ರತಿಕ್ರಿಯೆ ವ್ಯವಸ್ಥೆಯನ್ನು ಪರಿಶೀಲಿಸಲಿದೆ.

ನಿಯಮಿತ ಜಂಟಿ ಪರಿಶೀಲನೆ

ಸ್ಥಳೀಯ ಕಂದಾಯ, ಪೊಲೀಸ್, ಧರ್ಮದತ್ತಿ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳು ಪ್ರತಿ 15 ದಿನಗಳಿಗೊಮ್ಮೆ ದೇವಾಲಯಗಳಿಗೆ ಜಂಟಿಯಾಗಿ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಬೇಕು. ಪ್ರಮುಖ ‘ಎ’ ಹಾಗೂ ‘ಬಿ’ ಪ್ರವರ್ಗದ ದೇವಾಲಯಗಳಿಗೆ ಮೂರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಜಂಟಿಯಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರಣೇಶ್, ಧರ್ಮದತ್ತಿ ಇಲಾಖೆ ಅಧಿಕಾರಿ ವಿಶ್ವನಾಥ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku