
ಸುದ್ದಿ ಬೆಳಕು ವಾರ್ತೆ
ಯಾದಗಿರಿ, ಏಪ್ರಿಲ್ 19 : ಮಹಿಳಾ ಮೀಸಲಾತಿ ಕಾಯ್ದೆಯನ್ನು ವಿರೋಧಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳ ವಿರುದ್ಧ ನಾಗರತ್ನ ಕುಪ್ಪಿ ಟೀಕಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಮಹಿಳೆಯರ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷವು ಮಹಿಳಾ ಮೀಸಲಾತಿ ವಿಷಯದಲ್ಲಿ ವಿರೋಧ ವ್ಯಕ್ತಪಡಿಸುವ ಮೂಲಕ ತನ್ನ ದ್ವಂದ್ವ ನೀತಿಯನ್ನು ತೋರಿಸಿದೆ ಎಂದು ಆರೋಪಿಸಿದರು. ದೇಶದ ಮಹಿಳೆಯರಿಗೆ ಇದು ಸ್ಪಷ್ಟ ಸಂದೇಶವಾಗಿದ್ದು, ಕಾಂಗ್ರೆಸ್‌ನ ಮಹಿಳಾ ಸಂಸದರು ಸಹ ಇದನ್ನು ವಿರೋಧಿಸಿರುವುದು ಆಶ್ಚರ್ಯಕರ ಸಂಗತಿ ಎಂದು ಹೇಳಿದರು.
ಹಾಗೆಯೇ ಇತಿಹಾಸವನ್ನು ಉಲ್ಲೇಖಿಸಿದ ಅವರು, ೧೨ನೇ ಶತಮಾನದಲ್ಲೇ ಬಸವಣ್ಣ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಒತ್ತಿ ಹೇಳಿದ್ದಾರೆ. ಆದರೆ ಇಂದಿನ ಕಾಲದಲ್ಲಿ ಮಹಿಳಾ ಮೀಸಲಾತಿಗೆ ವಿರೋಧ ವ್ಯಕ್ತವಾಗುತ್ತಿರುವುದು ವಿಷಾದನೀಯ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಮಹಿಳಾ ಸಬಲೀಕರಣದ ದೃಷ್ಟಿಯಿಂದ ಮಹಿಳಾ ಮೀಸಲಾತಿ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸಿರುವುದನ್ನು ಅವರು ಶ್ಲಾಘಿಸಿದರು. ಆದರೆ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳ ವಿರೋಧದಿಂದ ಮಹಿಳೆಯರ ನಿರೀಕ್ಷೆಗೆ ಧಕ್ಕೆಯಾಗಿದೆ ಎಂದು ಹೇಳಿದರು.
ಮಹಿಳೆಯರು ತಮ್ಮ ಸಾಮರ್ಥ್ಯದಿಂದಲೇ ರಾಜಕೀಯದಲ್ಲಿ ಮುನ್ನಡೆ ಸಾಧಿಸಲು ಅರ್ಹರು. ಮಹಿಳಾ ಮೀಸಲಾತಿ ಕಾಯ್ದೆ ಜಾರಿಯಾದರೆ ಅನೇಕ ಮಹಿಳೆಯರಿಗೆ ಅವಕಾಶ ಸಿಗುತ್ತಿತ್ತು ಎಂದು ಹೇಳಿದರು.
ಇದೇ ವೇಳೆ, ಕೇವಲ ರಾಜಕೀಯ ಮನೆತನಗಳ ಮಹಿಳೆಯರಿಗಷ್ಟೇ ಅವಕಾಶ ಸೀಮಿತವಾಗಬಾರದು. ಗ್ರಾಮೀಣ ಭಾಗದಲ್ಲಿ, ಸಾಮಾನ್ಯ ಕುಟುಂಬಗಳಲ್ಲಿ ಇರುವ ಪ್ರತಿಭಾವಂತ ಮಹಿಳೆಯರೂ ಶಾಸನಸಭೆ ಮತ್ತು ಲೋಕಸಭೆಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಪಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಮಹಿಳಾ ಮೀಸಲಾತಿ ಜಾರಿಗೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ದೇಶದ ಮಹಿಳೆಯರು ಅಪಾರ ಸಂತೋಷ ವ್ಯಕ್ತಪಡಿಸಿದ್ದರು. ಆದರೆ ಕಾಂಗ್ರೆಸ್‌ನ ವಿರೋಧದಿಂದ ಆ ಆಶೆಗಳು ಭಂಗಗೊAಡಿವೆ. ಇದನ್ನು ದೇಶದ ಮಹಿಳೆಯರು ಕ್ಷಮಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.
ಈ ಹಿನ್ನೆಲೆಯಲ್ಲಿ ಮಹಿಳೆಯರಲ್ಲಿ ಜಾಗೃತಿ ಮೂಡಿಸಿ, ಕಾಂಗ್ರೆಸ್‌ನ ನಿಲುವಿನ ವಿರುದ್ಧ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು. ಜೊತೆಗೆ, ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ತರುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಒಟ್ಟಿನಲ್ಲಿ, ಮಹಿಳಾ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್‌ನ ದ್ವಿಮುಖ ನೀತಿಯನ್ನು ತೀವ್ರವಾಗಿ ಖಂಡಿಸುವುದಾಗಿ ನಾಗರತ್ನ ಕುಪ್ಪಿ ತಿಳಿಸಿದ್ದಾರೆ.










Leave a Reply