ಸಮಾಜದ ಏಳಿಗೆಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸೋಣ: ರಾಚಣ್ಣಗೌಡ ಮುದ್ನಾಳ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಒಗ್ಗಟ್ಟಿನಲ್ಲಿ ಬಲವಿದೆ. ಸಮಾಜದ ವಿಷಯ ಬಂದಾಗ ಎಲ್ಲರೂ ರಾಜಕೀಯ, ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲರೂ ಒಂದಾಗಿ ಶ್ರಮಿಸೋಣ ಎಂದು ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ ಹಾಗೂ ಉದ್ಯಮಿ ರಾಚಣ್ಣಗೌಡ ಮುದ್ನಾಳ ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ, ಜಿಲ್ಲಾ ಯುವ ಘಟಕ, ತಾಲೂಕು ಘಟಕ, ತಾಲೂಕು ಯುವ ಘಟಕ ಹಾಗೂ ವೀರಶೈವ ಸಮಾಜದ ಸಂಯುಕ್ತಾಶ್ರಯದಲ್ಲಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಯುವಘಟಕವು ತನ್ನ ಪದಾಧಿಕಾರಿಗಳ ಪಟ್ಟಿಯಲ್ಲಿ ಯಾದಗಿರಿ ಜಿಲ್ಲೆಗೆ ಅಗ್ರಸ್ಥಾನ ನೀಡಿದೆ. ಉತ್ಸಾಹಿ ಯುವಕರಾದ ಮಹೇಶರೆಡ್ಡಿ ಮುದ್ನಾಳ ಅವರನ್ನು ರಾಷ್ಟ್ರೀಯ ಯುವ ಘಟಕದ ಉಪಾಧ್ಯಕ್ಷರನ್ನಾಗಿ ಹಾಗೂ ಮಲ್ಲಿಕಾರ್ಜುನ ಅರುಣಿ, ಸುನೀಲಕುಮಾರ ವಾರದ ಅವರನ್ನು ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಿರುವುದು ಸಮಾಜಕ್ಕೆ ಆನೆಬಲ ತುಂಬಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಘಟಕದ ಅಭಿವೃದ್ಧಿ ಕಾರ್ಯಗಳಿಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಪ್ರಯತ್ನದಿಂದ ರಾಜ್ಯ ಸರ್ಕಾರ 1 ಎಕರೆ 6 ಗುಂಟೆ ಸಿಎ ಸೈಟ್ ಮಂಜೂರು ಮಾಡಿದೆ. ಅದನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಸಚಿವ ಶರಣಬಸಪ್ಪ ದರ್ಶನಾಪುರ ಹಾಗೂ ಶಾಸಕರ ಮೂಲಕ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪಿಸುವ ಸಮಾಜದ ಬಹುದಿನಗಳ ಬೇಡಿಕೆಯ ಕುರಿತ ಗೊಂದಲಗಳನ್ನು ನಿವಾರಿಸಿ ಎಲ್ಲರೂ ಒಟ್ಟಾಗಿ ಪ್ರಯತ್ನಿಸೋಣ. ಈಗಾಗಲೇ ಈ ವಿಷಯ ಸರ್ಕಾರದ ಗಮನಕ್ಕೆ ತರಲಾಗಿದ್ದು, ಶೀಘ್ರದಲ್ಲೇ ಬೇಡಿಕೆ ಈಡೇರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಅಬ್ಬೆತುಮಕೂರು ವಿಶ್ವಾರಾಧ್ಯ ಸಿದ್ಧಸಂಸ್ಥಾನ ಮಠದ ಶ್ರೀ ಶಿವಶೇಖರ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಸೊಪ್ಪಿ ಮಠದ ಪೂಜ್ಯ ಶ್ರೀ ಚನ್ನವೀರ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೊಸಂಬಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಶರಣಪ್ಪಗೌಡ ಕಾರೆಡ್ಡಿ ಮಲ್ಹಾರ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ಧಪ್ಪ ಹೊಟ್ಟಿ, ಜಿಲ್ಲಾ ಯುವ ಅಧ್ಯಕ್ಷ ಸುರೇಶ ಜಾಕಾ, ತಾಲ್ಲೂಕು ಅಧ್ಯಕ್ಷ ರಾಜಶೇಖರ ಪಾಟೀಲ ಚಾಮನಹಳ್ಳಿ, ತಾಲ್ಲೂಕು ಯುವ ಅಧ್ಯಕ್ಷ ಮಲ್ಲು ಸ್ವಾಮಿ ಗುಡಿಮಠ ಗುರಸುಣಿಗಿ, ವಡಿಗೇರಾ ತಾಲ್ಲೂಕು ಅಧ್ಯಕ್ಷ ಬಸವರಾಜ ಸೊನ್ನದ, ಜಿಲ್ಲಾ ಉಪಾಧ್ಯಕ್ಷ ಸಂಗಾರೆಡ್ಡಿಗೌಡ ಮಲ್ಹಾರ, ಅನ್ನಪೂರ್ಣ ಸಿ. ಪಾಟೀಲ, ಅಡಿವೆಪ್ಪ ಜಾಕಾ, ಭೀಮರೆಡ್ಡಿ ಗೋಗಿ, ಚನ್ನಮಲ್ಲಿಕಾರ್ಜುನ ಅಕ್ಕಿ, ಸಿದ್ಧಲಿಂಗಪ್ಪ ದೇಶಮುಖ, ಡಾ. ಚಂದ್ರಶೇಖರ ಸುಬೇದಾರ, ಅಯ್ಯಣ್ಣಗೌಡ ಕ್ಯಾಸಪನಹಳ್ಳಿ, ರುದ್ರಗೌಡ ಪಾಟೀಲ, ಶಂಕ್ರಪ್ಪಗೌಡ ಗೋನಾಲ, ಮಲ್ಲಣ್ಣಗೌಡ ಹಳಿಮನಿ ಕೌಳೂರ, ಸಿದ್ರಾಮರೆಡ್ಡಿ ತಿಪ್ಪರೆಡ್ಡಿ, ಶಿವರಾಜ ಪಾಟೀಲ ವಾರದ, ಪರಮಾನಂದರೆಡ್ಡಿ, ರಾಜು ಸ್ವಾಮಿ ಆನಂಪಲ್ಲಿ, ಸೋಮನಾಥ ಜೈನ್, ಶಿವರಾಜ ವಾರದ, ಚನ್ನಪ್ಪ ಬೊಮ್ಮರೆಡ್ಡಿ, ರವಿ ಬಾಪುರೆ, ರಾಜಶೇಖಯ್ಯ ಸ್ವಾಮಿ,ಲಕ್ಷ್ಮೀಪುತ್ರ ಮಾಲಿಪಾಟೀಲ್, ಮಲ್ಲಿಕಾರ್ಜುನ‌ ಕರಿಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಸಿದ್ಧರಾಜರೆಡ್ಡಿ ನಿರೂಪಿಸಿ ವಂದಿಸಿದರು.


ಸನ್ಮಾನ ಸ್ವೀಕರಿಸಿದ ರಾಷ್ಟ್ರೀಯ ಯುವ ಘಟಕದ ಉಪಾಧ್ಯಕ್ಷ ಮಹೇಶರೆಡ್ಡಿ ಮುದ್ನಾಳ ಮಾತನಾಡಿ, ಮಹಾಸಭಾದ ಅಸ್ತಿತ್ವ ಮತ್ತು ಅಭಿವೃದ್ಧಿಯಲ್ಲಿ ಮುದ್ನಾಳ ಕುಟುಂಬದ ಪಾತ್ರ ಹಿರಿದು. ಮಾಜಿ ಸಚಿವ ಲಿಂ. ವಿಶ್ವನಾಥರೆಡ್ಡಿ ಮುದ್ನಾಳ, ಮಾಜಿ ಶಾಸಕ ಲಿಂ. ವೆಂಕಟರೆಡ್ಡಿ ಮುದ್ನಾಳ ಅವರು ಮಹಾಸಭಾದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಸ್ಥಾಪನೆ, ಹೈದರಾಬಾದ್‌ನಲ್ಲಿ ಸಮಾಜದ ವಸತಿ ನಿಲಯ, ಕಟ್ಟಡ ನಿರ್ಮಾಣಕ್ಕೆ ಇವರು ನೀಡಿರುವ ಕೊಡುಗೆ ಮರೆಯುವಂತಿಲ್ಲ ಎಂದರು. ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಸೇರಿ ಅನೇಕರು ಗುರುತಿಸಿ ಜವಾಬ್ದಾರಿ ನೀಡಿದ್ದಾರೆ.ವೀರಶೈವ ಲಿಂಗಾಯತ ಸಮಾಜವನ್ನು ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಮಹಾಸಭಾದ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಎಲ್ಲರ ಸಹಕಾರದಿಂದ ಸಮಾಜದ ಸಂಘಟನೆಗೆ ಒತ್ತು ನೀಡುವುದಾಗಿ ತಿಳಿಸಿದರು.


ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಮಲ್ಲಿಕಾರ್ಜುನ ಅರುಣಿ ಗಾಜರಕೋಟ ಮಾತನಾಡಿ, ಸಮಾಜದ ಸಂಘಟನೆಗಾಗಿ ನೇಮಕವಾದ ಪದಾಧಿಕಾರಿಗಳಲ್ಲಿ ಜಿಲ್ಲೆಯ ಯುವಪಡೆಯನ್ನು ಗುರುತಿಸಿರುವುದು ಸಂತಸ ತಂದಿದೆ. ಶಾಸಕ ಶರಣಗೌಡ ಕಂದಕೂರ ಸೇರಿದಂತೆ ಹಿರಿಯರ ಮಾರ್ಗದರ್ಶನದಲ್ಲಿ ಸಂಘಟನೆ ಮಾಡುವುದಾಗಿ ಹೇಳಿದರು.

 

Leave a Reply

Your email address will not be published. Required fields are marked *

Suddi Belaku