
ಸುದ್ದಿ ಬೆಳಕು ವಾರ್ತೆ
ಯಾದಗಿರಿ: ಶಿಕ್ಷಕ ವೃತ್ತಿಯು ಅತ್ಯಂತ ಪವಿತ್ರ ಹಾಗೂ ಗೌರವಯುತವಾದ ವೃತ್ತಿಯಾಗಿದ್ದು, ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ್ ಹೇಳಿದರು.
ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶ್ರೀಮತಿ ಹನುಮಂತಿ ಯಲ್ಲಪ್ಪ ಮಾಳಿಕೇರಿ, ಮುಖ್ಯಗುರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಖಾನಳ್ಳಿ ಅವರ ವಯೋನಿವೃತ್ತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕ ವೃತ್ತಿ ಕೇವಲ ಉದ್ಯೋಗವಲ್ಲ, ಅದು ಸಮಾಜ ನಿರ್ಮಾಣದ ಮಹತ್ತರ ಜವಾಬ್ದಾರಿಯಾಗಿದೆ. ಸಾವಿರಾರು ವಿದ್ಯಾರ್ಥಿಗಳ ಜೀವನಕ್ಕೆ ದಾರಿದೀಪವಾಗುವ ಶಿಕ್ಷಕರು ನಿಜವಾದ ಶಿಲ್ಪಿಗಳು. ಶಿಕ್ಷಕರಿಗೆ ವಯೋನಿವೃತ್ತಿ ಇರಬಹುದು, ಆದರೆ ಸಮಾಜದಲ್ಲಿ ಅವರಿಗೆ ದೊರೆಯುವ ಗೌರವ ಎಂದಿಗೂ ನಿವೃತ್ತಿಯಾಗುವುದಿಲ್ಲ ಎಂದು ಹೇಳಿದರು.
ಗುರುವಿನ ಪಾತ್ರ ಅತ್ಯಂತ ಮಹತ್ವದ್ದು
ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಬಾಲಪ್ಪ ಚಿಕ್ಕಮೇಟಿ ಮಾತನಾಡಿ, ಒಂದು ಮನೆಗೆ ಭದ್ರ ಬುನಾದಿ ಎಷ್ಟು ಮುಖ್ಯವೋ, ಅದೇ ರೀತಿ ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಗುರುವಿನ ಮಾರ್ಗದರ್ಶನ ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದರು.
ಶಿಕ್ಷಕರ ಕೊರತೆ ನೀಗಿಸಲು ಆಗ್ರಹ
ಸಿ.ಆರ್.ಪಿ. ಬಂಗಾರಪ್ಪ ಮಾತನಾಡಿ, ಜಿಲ್ಲೆಯ ಅನೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಸರ್ಕಾರ ಶೀಘ್ರವೇ ಶಿಕ್ಷಕರ ನೇಮಕಾತಿ ನಡೆಸಿ ಜಿಲ್ಲೆಯ ಶೈಕ್ಷಣಿಕ ವಾತಾವರಣವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳ ಸಾಧನೆಗೆ ಗುರುವಿನ ಕೊಡುಗೆ ಅಪಾರ
ಕಾಂಗ್ರೆಸ್ ಜಿಲ್ಲಾ ವಕ್ತಾರ ಹಾಗೂ ಕಾರ್ಯದರ್ಶಿ ಸ್ಯಾಮ್‌ಸನ್ ಮಾಳಿಕೇರಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯ ಸಾಧನೆಯ ಹಿಂದೆ ಗುರುವಿನ ಬೋಧನೆ, ಕರ್ತವ್ಯನಿಷ್ಠೆ ಹಾಗೂ ಮಾರ್ಗದರ್ಶನ ಮಹತ್ತರ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಮಲ್ಲಿಕಾರ್ಜುನ ಪೋಷ್ಟಿ, ಬೋಧಕೇತರ ನೌಕರರ ಸಂಘದ ಜಿಲ್ಲಾಧ್ಯಕ್ಷ ಆದೆಪ್ಪ ಬಾಗ್ಲಿ, ಹಿರಿಯ ಮುಖಂಡ ಮಲ್ಲಣ್ಣ ದಾಸನಕೇರಿ, ನಿವೃತ್ತ ಮುಖ್ಯ ಶಿಕ್ಷಕ ಸುಭಾಷ ಮಾಳಿಕೇರಿ, ನಿವೃತ್ತ ತಹಶೀಲ್ದಾರ ಸಿದ್ದಲಿಂಗಪ್ಪ ನಾಯಕ, ಶಾಂತರಾಜ ಮೋಟ್ನಳ್ಳಿ, ಹಣಮಂತಪ್ಪ ಶಿರಗೋಳ್, ನಾಗಪ್ಪ ಮಾಸ್ಟರ್ ಮ್ಯಾಗೇರಿ, ನಿವೃತ್ತ ಕೃಷಿ ಅಧಿಕಾರಿ ಯಲ್ಲಪ್ಪ ಮಾಳಿಕೇರಿ, ಶಂಕರ್ ಸೋನಾರ್, ವೆಂಕಯ್ಯ ಎಸ್.ಟಿ.ಟಿ. ಚಿನ್ನಕಾರ, ಬಸವರಾಜ್ ಪೂಜಾರಿ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಯೋನಿವೃತ್ತಿ ಹೊಂದಿದ ಶ್ರೀಮತಿ ಹನುಮಂತಿ ಯಲ್ಲಪ್ಪ ಮಾಳಿಕೇರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗುರುಪ್ರಸಾದ್ ವೈದ್ಯ ಕಾರ್ಯಕ್ರಮ ನಿರೂಪಿಸಿದರು. ದುರ್ಗಪ್ಪ ಪೂಜಾರಿ ವಂದಿಸಿದರು.











Leave a Reply