ಸುರಪುರ: ಪ್ರಜಾಸೇವೆಯಲ್ಲಿ ವಿಬಿ-ಗ್ರಾಮ್ ಜಿ ಗ್ಯಾರಂಟಿ ಕಾರ್ಡ್ ವಿತರಣೆ

Posted by

ಸುದ್ದಿ ಬೆಳಕು ವಾರ್ತೆ

ಸುರಪುರ/ಯಾದಗಿರಿ ಸಾರ್ವಜನಿಕರ ಮನೆಬಾಗಿಲಿಗೆ ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ತಲುಪಿಸುವ ‘ಪ್ರಜಾಸೇವಾ’ ಕಾರ್ಯಕ್ರಮದ ಅಂಗವಾಗಿ, ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯಿತಿ ವತಿಯಿಂದ ಸುರಪುರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಲಾಗಿದ್ದ ಬೃಹತ್ ಜನಸಂಪರ್ಕ ಮೇಳದಲ್ಲಿ ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ)’ (VB-GRAM G) ಯೋಜನೆಯ ಮಾಹಿತಿ ಶಿಕ್ಷಣ ಸಂವಹನ (IEC) ಕೇಂದ್ರದ ವಿಶೇಷ ಮಳಿಗೆಯನ್ನು ತೆರೆಯಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹಾಗೂ ಸುರಪುರ ಕ್ಷೇತ್ರದ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಜಂಟಿಯಾಗಿ ಪ್ರಜಾಸೇವಾ ಕಾರ್ಯಕ್ರಮ ಹಾಗೂ ವಿಬಿ-ಗ್ರಾಮ್ ಜಿ ಮಾಹಿತಿ ಮಳಿಗೆಗೆ ಅಧಿಕೃತ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, “ಗ್ರಾಮೀಣ ಭಾಗದ ಕೂಲಿಕಾರ್ಮಿಕರಿಗೆ ನಿರಂತರ ಉದ್ಯೋಗಾವಕಾಶ ಹಾಗೂ ಬದುಕಿಗೆ ಆರ್ಥಿಕ ಭದ್ರತೆ ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಅರ್ಹ ಫಲಾನುಭವಿಗಳು ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು,” ಎಂದು ತಿಳಿಸಿದರು.

ಸ್ಥಾಪಿಸಲಾಗಿದ್ದ ಮಾಹಿತಿ ಕೇಂದ್ರದಲ್ಲಿ ಗ್ರಾಮಸ್ಥರಿಗೆ ವಿಬಿ-ಗ್ರಾಮ್ ಜಿ ಯೋಜನೆಯ ಮಹತ್ವ, ಹಕ್ಕುಗಳು, ಸೌಲಭ್ಯಗಳು ಹಾಗೂ ಉದ್ಯೋಗ ಪಡೆಯುವ ವಿಧಾನಗಳ ಕುರಿತು ಅಧಿಕಾರಿಗಳು ಸಮಗ್ರ ಮಾರ್ಗದರ್ಶನ ನೀಡಿದರು. ಜತೆಗೆ, ಸ್ಥಳದಲ್ಲೇ ನಮೂನೆ–೧ ಹಾಗೂ ನಮೂನೆ–೬ ಅರ್ಜಿಗಳನ್ನು ವಿತರಿಸಿ, ಕೂಲಿಕಾರ್ಮಿಕರಿಂದ ಉದ್ಯೋಗ ಬೇಡಿಕೆ ಅರ್ಜಿಗಳನ್ನು ಸ್ವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ಸಚಿವರು ಹಾಗೂ ಶಾಸಕರು ಅರ್ಹ ಫಲಾನುಭವಿಗಳಿಗೆ ಗ್ರಾಮೀಣ ರೋಜಗಾರ್ ಗ್ಯಾರಂಟಿ ಜಾಬ್ ಕಾರ್ಡ್‌ಗಳನ್ನು ನೇರವಾಗಿ ವಿತರಿಸಿದರು.

ವೇದಿಕೆಯಲ್ಲಿ ಯಾದಗಿರಿ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಸಿ.ಬಿ. ದೇವರಮನಿ, ಸುರಪುರ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಬಸವರಾಜ ಸಜ್ಜನ್, ಡಿಎಂಐಎಸ್ ರಾಘವೇಂದ್ರ, ಡಿಐಇಸಿ ಪರಶುರಾಮ, ಟಿಐಇಸಿ ಮಲ್ಲಿಕಾರ್ಜುನ, ದುರ್ಗೇಶ್, ಮಲ್ಲಿಕಾರ್ಜುನ, ಟಿಸಿ ಹಿರೇಮಠ, ತಾಲ್ಲೂಕು ಟಿಎಂಐಎಸ್ ವೆಂಕನಗೌಡ, ಜಿಕೆಎಂ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

You Might Also Like

Leave a Reply

Your email address will not be published. Required fields are marked *

Suddi Belaku