ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ, ಬದಲಾವಣೆಗೆ ಪ್ರೇರಣೆ : ಸಚಿವ ಡಾ. ಪಾಟೀಲ್

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಪ್ರಸಕ್ತ ದಿನಗಳಲ್ಲಿ ನಾವು ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದರು, ಅತಿಯಾದ ಒತ್ತಡದಲ್ಲಿ ಜೀವನ ಕಳೆಯುತ್ತಿದ್ದೇವೆ, ಬದುಕಿನ ಸ್ವಲ್ಪ ಸಮಯ ಅಧ್ಯಾತ್ಮಿಕ ಕ್ಷೇತ್ರಕ್ಕೆ ಮೀಸಲಿಡಬೇಕು, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುವ ಜೊತೆಗೆ ಸಕಾರಾತ್ಮಕ ಚಿಂತನೆಗಳು ಮೂಡಿ, ಪರಿವರ್ತನೆಗೆ ಪ್ರೇರಣೆ ಸಿಗುತ್ತದೆ ಎಂದು ರಾಜ್ಯ ವೈದ್ಯಕೀಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಾಡಿನ ಪ್ರಸಿದ್ದ ಮಠಗಳಲ್ಲಿ ಒಂದಾದ ತಾಲ್ಲೂಕಿನ ಅಬ್ಬೆತುಮಕೂರಿನ ಶ್ರೀ ವಿಶ್ವಾರಾಧ್ಯರ ಅನುಗ್ರಹ ಕ್ಷೇತ್ರಕ್ಕೆ ಭೇಟಿ ನೀಡಿ, ವಿಶ್ವಾರಾಧ್ಯರ ದರ್ಶನ ಪಡೆದು ಶ್ರೀ ಮಠದ ಪೀಠಾಧಿಪತಿಗಳಾದ ಡಾ. ಗಂಗಾಧರ ಮಹಾಸ್ವಾಮಿಜಿಯವರಿಗೆ ೫೮ನೇ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ ಅವರಿಂದ ಆಶೀರ್ವಾದ ಪಡೆದು ಮಾತನಾಡಿದರು.
ಈ ಭರತ ಭೂಮಿಯಲ್ಲಿ ಅನಾದಿ ಕಾಲದಿಂದ ಋಷಿ ಮುನಿಗಳು, ಸಾಧು-ಸಂತರು, ಶರಣರು, ಸೂಫಿ-ಸಂತರು ಜನ್ಮ ತಾಳಿ ಆಯಾ ಕಾಲಘಟ್ಟದಲ್ಲಿ ಅಧ್ಯಾತ್ಮಿಕ ಸಾಧನೆ ಮಾಡಿ, ಸಮಾಜಕ್ಕೆ ಮಾನವೀಯ ಸಂದೇಶಗಳನ್ನು ನೀಡುವ ಜೊತೆಗೆ ಸಮ ಸಮಾಜ ನಿರ್ಮಾಣಕ್ಕೆ ಯತ್ನಿಸಿ, ಸಾಮರಸ್ಯದ ಸಮಾಜ ಕಲ್ಪನೆಯಲ್ಲಿ ಎಲ್ಲರ ಒಳಿತಿಗಾಗಿ ಕೆಲಸ ಮಾಡಿದರು, ಅವರ ಸಾಲಿನಲ್ಲಿ ವಿಶ್ವಾರಾಧ್ಯರು ಒಬ್ಬರಾಗಿದ್ದಾರೆ, ತಮ್ಮ ಬದುಕನ್ನು ಲೋಕ ಕಲ್ಯಾಣಕ್ಕೆ ಅರ್ಪಿಸುವ ಮೂಲಕ ಸಹಸ್ರಾರು ಭಕ್ತರ ಮನಸ್ಸಿನಲ್ಲಿ ಇನ್ನೂ ಶಾಶ್ವತವಾಗಿ ನೆಲೆಸಿ, ಪೂಜಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಇಲ್ಲಿನ ಶ್ರೀಮಠವು ಭಾವೈಕ್ಯತೆಯ ಕ್ಷೇತ್ರವಾಗಿದ್ದು, ತ್ರಿವಿಧ ದಾಸೋಹಗಳ ಮೂಲಕ ಶ್ರೀಗಳು ಪರಿವರ್ತನೆಗೆ ಶ್ರಮಿಸುತ್ತಿದ್ದಾರೆ, ಅವರ ಆಶೀರ್ವಾದ, ಮಾರ್ಗದರ್ಶನ ನಮ್ಮೆಲ್ಲರಿಗೂ ಅವಶ್ಯಕ ಎಂದು ಶ್ರೀ ಮಠದ ಕಾರ್ಯಗಳನ್ನು ಶ್ಲಾಘಿಸಿದರು.
ಡಾ. ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ರಾಜಕಾರಣಿಗಳು ನೈತಿಕ ಮೌಲ್ಯ, ಜನಪರ ಕಾಳಜಿಯನ್ನು ಹೊಂದಿ ಸಾರ್ವಜನಿಕ ಸೇವೆ ಮಾಡಿದರೆ ಅದಕ್ಕೆ ಅರ್ಥ ಬರುತ್ತದೆ. ಅಭಿವೃದ್ಧಿ ಚಿಂತನೆಗಳ ಮೂಲಕ ಪ್ರಾಮಾಣಿಕತೆ ರೂಢಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಡಾ. ಪಾಟೀಲರ ಸಾರ್ವಜನಿಕ ಬದುಕು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಶುದ್ಧ ಹಸ್ತ ಮತ್ತು ಪರಿಶುದ್ಧ ಧ್ಯೇಯದ ಮೂಲಕ ನಾಡಿನ ಜನರ ಸೇವೆ ಮಾಡುತ್ತಿರುವ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಅಪರೂಪದ, ಸರಳ, ಸಜ್ಜನ, ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ರಾಜಕಾರಣಿಯಾಗಿದ್ದಾರೆ ಎಂದು ಹೇಳಿದರು.
ಶ್ರೀ ಮಠದಲ್ಲಿ ಕೆಲ ಸಮಯ ಕಳೆದ ಸಚಿವರು ಶ್ರೀಗಳೊಂದಿಗೆ ಮಠದ ಚಟುವಟಿಕೆಗಳ ಬಗ್ಗೆ ಚರ್ಚಿಸಿ, ಶಾಲಾ ಕಾಲೇಜುಗಳನ್ನು ವಿಕ್ಷೀಸಿದರು.
ಈ ಸಂದರ್ಭದಲ್ಲಿ ಶ್ರೀ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಶೇಖರ ಶಿವಾಚಾರ್ಯ ಸ್ವಾಮಿಗಳು , ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಬಸರಡ್ಡಿ ಪಾಟೀಲ್ ಅನಪೂರ, ಮುಖಂಡರಾದ ಸಿದ್ದಲಿಂಗರಡ್ಡಿ ಉಳ್ಳೇಸುಗೂರ, ಚಿದಾನಂದಪ್ಪ ಕಾಳೆಬೆಳಗುಂದಿ, ಬಸ್ಸುಗೌಡ ಬಿಳ್ಹಾರ, ಶಾಮಸನ್ ಮಾಳಿಕೇರಿ, ಸಂಗನಗೌಡ ಮೂಡಬೂಳ, ತಿಮ್ಮಣ್ಣ ನಾಯಕ, ಶಿವು ಬೆಳಗುಂದಿ, ಶರಣಗೌಡ ನಾಚವಾರ, ಸಿದ್ದಪ್ರಕಾಶರಡ್ಡಿ ನಾಲವಾರ, ಮೋಹನರಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು

You Might Also Like

Leave a Reply

Your email address will not be published. Required fields are marked *

Suddi Belaku